ಮತ್ರ್ಯದಲ್ಲಿ ಹುಟ್ಟಿ, ಕಂಗಳ ಮುಂದಣ
ಕತ್ತಲೆಯ ಕಳೆಯದೆ,
ನಾವು ಗುರು ಜಂಗಮ, ನಾವು ಭಕ್ತರು
ಎಂಬ ನುಡಿಗೆ ಏಕೆ ನಾಚರೋ ?
ಭಕ್ತನಾದರೆ, ಸತ್ತುಚಿತ್ತಾನಂದವನೊತ್ತಿ ಮೆಟ್ಟಿ,
ತತ್ವಮಸಿವಾಕ್ಯವೆಂದು ಕಂಡು ಬಿಟ್ಟು,
ಲಿಂಗದ ಗೊತ್ತುವಿಡಿದು, ಹಿಂದೆ ಹರಿದು,
ಗುರುವಿನ ಗೊತ್ತನರಿದು,
ಜಗದೊಳಗಣ ಗುಂಗುದಿಯನೆಲ್ಲವ ಹರಿದು,
ಜಂಗಮದ ಗೊತ್ತನರಿದು,
ಮುಂದಣ ಮುಕ್ತಿ ಎಂಬುದ ಮರೆದು,
ಎಂತಿರ್ದಂತೆ ಬ್ರಹ್ಮವು ತಾನೆ ಎಂಬುದನರಿದು,
ಪರಿಣಾಮದಲ್ಲಿ ಪರವಶನಾಗಿ ನಿಂದು,
ಮತ್ತೆ ಆರನೆಣಿಸಲಿಲ್ಲ, ಮೂರು ಮುಟ್ಟಲಿಲ್ಲ,
ಬೇರೊಂದುಂಟೆನಲಿಲ್ಲ ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಿಗೆ
ಸೂರೆಹೋದ ಶರಣನು.