Index   ವಚನ - 206    Search  
 
ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು ಹೆಸರಿಟ್ಟುಕೊಂಡು ಚೆನ್ನಾಗಿ ನುಡಿವಿರಿ. ಶುದ್ಧವಾದ ಮುಖ, ಸಿದ್ಧವಾದ ಮುಖ, ಪ್ರಸಿದ್ಧವಾದ ಮುಖ, ಅರಿದರೆ ನೀವು ಹೇಳಿರೊ. ಅರಿದು ಅರಿಯದೆ, ಅರಿಮರುಳುಗಳಿರಾ ನೀವು ಕೇಳಿರೊ. ಕಾಯಕರಣಾದಿಗಳ ಗುಣವಳಿದುದೆ ಶುದ್ಧ . ಜೀವನ ದೃಶ್ಯ ಕೆಟ್ಟು, ಜಗದ ವ್ಯಾಕುಳವಳಿದು, ನಿರಾಕುಳದಲ್ಲಿ ನಿಂದುದೆ ಸಿದ್ಧ. ಪ್ರಾಣದ ಭಯ ಮರಣದ ಭಯ ಮರಣಾದಿಗಳ ಹಿಂಗಿ, ಭಾವಳಿದು ಭವಕ್ಕೆ ಸವೆದುದೆ ಪ್ರಸಿದ್ಧ . ಈ ತೆರನನರಿಯದೆ ಎತ್ತರ ತೆತ್ತರನಾಗಿ ನುಡಿವಿರಿ. ಬಲ್ಲವರೆನಿಸಿಕೊಂಡಿಹೆವೆಂದು ನಿಮ್ಮ ಬಲ್ಲತನ ಹಾಳಾಯಿತ್ತು . ನೀವು ಬರುಸೂರೆಯ ಹೋಗುವುದನರಿಯದೆ, ಬರಿದೆ ಏಕೆ ಅರಚಾಗಿ ಸತ್ತಿರಿ, ನೆರೆ ಮೂರು ಲೋಕವೆಲ್ಲ? ಇದನರಿದಾದರೂ ಆರಿಗೂ ಕೊಡಬೇಡ, ಕೊಳಬೇಡ. ಮನಮುಟ್ಟಿ ಎರಗಿ ಬದುಕಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .