Index   ವಚನ - 205    Search  
 
ಶೀಲವಂತರು, ಶೀಲವಂತರು ಎಂಬರು ಶೀಲವಂತಿಕೆಯನಾರು ಬಲ್ಲರು ಹೇಳಾ ? ನೆಲಕೆ ಶೀಲ ಶೀಲವೆಂಬೆನೆ ? ಹೊಲೆ ಹದಿನೆಂಟು ಜಾತಿ ನಡೆ ನುಡಿವುದಕ್ಕೆ ಒಂದೆಯಾಯಿತ್ತು. ಜಲಕೆ ಶೀಲವೆಂಬೆನೆ? ಮೀನು ಮೊಸಳೆಗಳು ಖಗಮೃಗಂಗಳು ನಿಂದೆಂಜಲು. ಬೆಳೆಗೆ ಶೀಲವೆಂಬೆನೆ? ಎತ್ತು ಕತ್ತೆ ತಿಂದು ಮಿಕ್ಕ ಎಂಜಲು. ಹೊನ್ನಿಗೆ ಶೀಲವೆಂಬೆನೆ? ಉರ ಹೊರೆಯಾಗಿಪ್ಪುದು. ಹೆಣ್ಣಿಗೆ ಶೀಲವೆಂಬೆನೆ? ಕಣ್ಣುಗೆಡಿಸಿ ಕಾಡುತಿಪ್ಪುದು. ಇನ್ನಾವುದು ಶೀಲ ಹೇಳಿರಣ್ಣಾ? ಇದಕ್ಕೆ ಒಳಗಾದವರೆಲ್ಲ ದುಃಶೀಲರು. ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ. ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.