Index   ವಚನ - 209    Search  
 
ಶ್ರೀಜಂಗಮಲಿಂಗ ಎಂತಿಹನೆಂದಡೆ : ಇಂತೀ ಅಜಾಂಡಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ, ತಾ ನಿರ್ಗಮನಿಯಾಗಿ ಲಿಂಗರೂಪಾಗಿ ಸುಳಿಯಬಲ್ಲರೆ ಜಂಗಮಲಿಂಗವೆಂಬೆ. ಅದಕ್ಕೆ ನಮೋ ನಮೋ, ಆ ನಿಲವಿಂಗೆ ಭವವಿಲ್ಲ ಬಂಧನವಿಲ್ಲ . ಇಂತಲ್ಲದೆ ವೇಷವ ಹೊತ್ತು , ಹೊರವೇಷದ ವಿಭೂತಿ ರುದ್ರಾಕ್ಷಿಯ ತೊಟ್ಟು, ಕಾಸುವಿಗೆ ಕೈಯಾಂತು ವೇಶಿದಾಸಿಯರ ಬಾಗಿಲ ಕಾಯ್ದು, ಲೋಕದೊಳಗೆ ಗಾಸಿಯಾಗಿ ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ, ಕಣ್ಣುಗಾಣದೆ ಜಾರಿಬಿದ್ದು, ದೂರಿಂಗೆ ಬಂದು, ಈ ಮೂರಕ್ಕೊಳಗಾಗಿ, ಪಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ. ಅವರು ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ. ನಿಮ್ಮಾಣೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .