Index   ವಚನ - 220    Search  
 
ಸ್ಥಲವಿಟ್ಟು ನಡೆಯಬೇಕೆಂಬರು, ಸ್ಥಲವಿಟ್ಟು ನುಡಿಯಬೇಕೆಂಬರು. ಸ್ಥಲದ ನೆಲೆಯನಾರೂ ಅರಿಯರು. ಕಾಯಸ್ಥಲ, ಕರಸ್ಥಲ, ಭಾವಸ್ಥಲವನರಿದು, ಆ ಕಾಯಸ್ಥಲ ಕರಸ್ಥಲ ಭಾವಸ್ಥಲದಲ್ಲಿ ಕೂಡಿ ನಿಲಿಸುವದೆ ಸ್ಥಲ. ಇದನರಿಯದೆ, ಹಿಂದಕ್ಕೆ ನುಡಿದವರ ಮಾತು ಕಲಿತುಕೊಂಡು, ಈಗ ನುಡಿವವರ ಮಾತ ಮೆಚ್ಚುವರೆ ನಮ್ಮ ಶರಣರು? ಅದಂತಿರಲಿ. ಇನ್ನು ನೇಮವಾವುದು ಎಂದರೆ, ಗುರುಲಿಂಗಜಂಗಮದ ಪಾದೋದಕ ಪ್ರಸಾದವನರಿದು, ಅಂಗೀಕರಿಸಿ, ತನ್ನ ತನುವನೆ ಪ್ರಸಾದವ ಮಾಡುವದೀಗ ನೆಲೆ. ಈ ಸ್ಥಲದ ನೆಲೆಯ ಬಲ್ಲವರಿಗೆ ನಮೋ ನಮೋ ಎಂಬೆ. ಇದನರಿಯದೆ ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.