Index   ವಚನ - 245    Search  
 
ಹೆಸರಿಗೆ ಬಾರದ ಘನವ ಹೆಸರಿಗೆ ತಂದು, ನುಡಿದಾಡುವ ಕಿಸುವಾಯರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ಈ ಪಶುಗಳೇನು ಬಲ್ಲರು? ಬಸವನೆಂತಿಪ್ಪನೆಂಬುದ ವಸುಧೆಯ ಮನುಜರೆತ್ತಬಲ್ಲರು? ಇದು ಹುಸಿ ಹುಸಿ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಆ ಬಸವನ ನೆಲೆಯ ಬಸವಾದಿ ಪ್ರಮಥರೆ ಬಲ್ಲರಲ್ಲದೆ, ಈ ಹುಸಿಮಾಯೆಗೊಳಗಾದ ಸೂತಕರೆತ್ತಬಲ್ಲರು ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?