ಹೊತ್ತಾರೆ ಎದ್ದು ಹೂವು ಪತ್ರೆ ಉದಕವ ತಂದು,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿಹೆನೆಂದು,
ಸೊರಟೆಯ ಮೊರಟೆಯ ಹರಡಿ, ಕೈಕಾಲ ಮುಖವ ತೊಳೆದು,
ವಿಭೂತಿಯ ಧರಿಸಿ, ರುದ್ರಾಕ್ಷಿಯ ತೊಟ್ಟು,
ತನು ಶುದ್ಧವ ಮಾಡಿ, ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬಿರಿ.
ಈ ಮೊದಲು ತಂದ ಪತ್ರೆ ಪುಷ್ಪ ಉದಕವೆ ದೇವರೊ?
ಈ ಹರಡಿಕೊಂಡಿರುವ ಸೊರಟೆ ಮೊರಟೆಗಳೆ ದೇವರೊ?
ಈ ತೊಳೆದುಕೊಂಬ ಕೈಕಾಲು ಮುಖವೆ ದೇವರೊ?
ಈ ಧರಿಸಿದ ವಿಭೂತಿ ರುದ್ರಾಕ್ಷಿಯೆ ದೇವರೊ?
ನಿಮ್ಮ ಕೈಯಲ್ಲಿ ಇಪ್ಪುದೆ ದೇವರೊ?
ನೀವೆ ದೇವರೊ?
ಇವರೊಳಗೆ ಆವುದು ದೇವರೆಂಬಿರಿ?
ಅರಿವುಳ್ಳವರು ನೀವು ಹೇಳಿರೊ.
ದೇವರು ದೇವರು ಎಂದು ಒಂದಲ್ಲದೆ, ಎರಡುಂಟೆ?
ಇಂತಿದನರಿಯದೆ, ಬರುವ ಸೂರೆಹೋದಿರಲ್ಲ.
ಇನ್ನಾದರು ಅರಿದು ಬದುಕಿರೊ ನಾನೊಂದ ಹೇಳಿದೆನು.
ಇವೆಲ್ಲವನು ಮಾಡಬೇಕೆಂಬುದೀಗ ಲಿಂಗ,
ಮಾಡುವದೀಗ ಜಂಗಮ.
ಲಿಂಗ ಜಂಗಮವೆಂದರೆ ಒಂದೇ ಅಂಗಭೇದವು.
ನಮ್ಮ ಶರಣರು ಬಲ್ಲರಲ್ಲದೆ,
ಮರಣಬಾಧೆಗೊಳಗಾಗುವ
ಮರ್ತ್ಯದ ಮನುಜರು ಅರಿಯರು
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.