Index   ವಚನ - 30    Search  
 
ಎನ್ನ ಗುರುವೆನ್ನ ಪ್ರಾಣಲಿಂಗವ ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ: ಪಚ್ಚೆಯ ನೆಲಗಟ್ಟಿನ ಮೇಲೆ ಚೌಮೂಲೆಯ ಸರಿಸದಲ್ಲಿ. ಷೋಡಷ ಕಂಬಂಗಳ ಮಂಟಪವ ಮಾಡಿ, ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ, ಎನ್ನಂತರಂಗದಲ್ಲಿ ಚತುಷ್ಕೋಣೆಯ ಚತುರ್ದಳದ ನೆಲಗಟ್ಟಿನ ಮೇಲೆ ಷೋಡಷಕಲೆಗಳೆಂಬ ಹದಿನಾರುಕಂಬವ ನೆಟ್ಟು, ಧ್ಯಾನ ವಿಶ್ರಾಮದ ಮೇಲೆ ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ, ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು ಅನುಗ್ರಹವ ಮಾಡಿದಡೆ, ನುಡಿಯಡಗಿದ, ಒಡಲಳಿದ ಸ್ವಯಲಿಂಗಸಂಬಂಧವಾದ ಭೇದವ ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ.