Index   ವಚನ - 41    Search  
 
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು, ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ, ಅಕ್ಕಿ ತುಪ್ಪವನೀಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ? ತನ್ನ ಪ್ರಾಣಲಿಂಗವನವರಿಗೆ ಕೊಟ್ಟು, ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ? ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ.