ಕೂತಾಗ ಭಕ್ತ ಮುನಿದಾಗ ಮಾನವನಾದ
ಪಾತಕರ ನುಡಿಯ ಕೇಳಲಾಗದು.
ಅಂಥ ಪಾತಕರ ಉಲುಹೆಂಬುದು,
ಉಲಿವ ಕಬ್ಬಕ್ಕಿಯ ಉಲುಹಿನಂತೆ.
ಅದನು ಮಹಂತರು ಕೇಳಲಾಗದು.
ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ,
ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ,
ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ,
ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ?
ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ
ಅವರುಗಳು ಪ್ರೇತಗಾಮಿಗಳು.
ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು
ತಾವಾರೆಂದರಿಯರು.
ಇಂದು ನಿಂದ ಗತಿಯ ತಿಳಿಯರು,
ಮುಂದಣ ಗತಿಯನೆಂತೂ ಎಯ್ದಲರಿಯರು.
ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ
ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ,
ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ,
ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ,
ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು,
ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು,
ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು.
ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು.
ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ
ನಂದಿಕೇಶ್ವರನ ಉದಾಸೀನಂ ಮಾಡಿ,
ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು.
ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ,
ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ,
ಆ ದೇವ ಮುನಿಗಳೊಳಗಾಗಿ,
ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ.
ಕುಬೇರನಿಂದಧಿಕವಹ ಧನ,
ದೇವೇಂದ್ರನಿಂದಧಿಕವಹ ಐಶ್ವರ್ಯ,
ಸೂರ್ಯನಿಂದಧಿಕವಹ ತೇಜಸ್ಸು,
ಗಜ ಪಟೌಳಿ ಸೀತಾಂಗನೆಗತ್ಯಧಿಕವಹ
ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು.
ಕೋಟಿವಿದ್ಯದಲ್ಲಿ ನೋಡುವಡೆ
ಸಹಸ್ರವೇದಿಯೆನಿಸುವ ರಾವಣನು
ಪಾರದ್ವಾರಕಿಚ್ಛೈಸಿ ಪರವಧುವಿನ
ದೆಸೆಯಿಂದಲೇನಾದನರಿಯರೆ!
ತನು ಕೊಬ್ಬಿನ ಮನ, ಮನ
ವಿಕಾರದ ಇಂದ್ರಿಯ ವಿಷಯಂಗಳ
ಅಂದವಿಡಿದ ವಿಕಳತೆಯಲ್ಲಿ
ನುಡಿವ ಸಟೆಗರ ಕಾಯಲರಿವವೆ?
ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ
ಕಂಡೂ ಕೇಳಿಯೂ ಅರಿಯರು.
ಹರನ ಸದ್ಭಕ್ತರ ಕೂಡೆ ವಿರೋಧಿಸಿ,
ನರಕವನು ಮುಂದೆ ಅನುಭವಿಸಿ,
ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ.
ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು,
ನಿತ್ಯಪದವ ಪಡೆಯಿರೆ ಮರುಳ ಪ್ರಾಣಿಗಳಿರಾ!
ಕೆಡಬೇಡ, ಕೆಡಬೇಡ ಕೇಳಿರೆ ಘಾಸಿ ಮಾಡುವನು ನಿಮ್ಮ ಸೋಜಿಗ.
ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು
ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
Art
Manuscript
Music
Courtesy:
Transliteration
Kūtāga bhakta munidāga mānavanāda
pātakara nuḍiya kēḷalāgadu.
Antha pātakara uluhembudu,
uliva kabbakkiya uluhinante.
Adanu mahantaru kēḷalāgadu.
Adakkadu svabhāvavembuda ballarāgi,
matigeṭṭu nuḍiva mattaraha matryara nuḍiya gaḍaṇe,
bhrāntiviḍida bhramitarige yōgyavallade,
sajjana sātvika jñānavēdyaraha sadbhaktaru meccavare?
Asatyave rūpāgippa śūn'yavādigaḷettalū sallarāgi
avarugaḷu prētagāmigaḷu.
Amēdhya kūpadalli utpannavāda krimigaḷantappa jīvigaḷu
tāvārendariyaru.Indu ninda gatiya tiḷiyaru,
mundaṇa gatiyanentū eydalariyaru.
Ātmanu śvēta pīta harita kapōta māṇḍiṣṭa kr̥ṣṇaremba
ṣaḍvarṇadoḷagāva varṇavendū vicārisalariyarāgi,
bhrāntuviḍidu ātmōhamendu ahaṅkarisi,
ajñāna talegēri, mattatanadindajāta śivaśaraṇara dūṣisi,
mithyavādadinda nuḍivaru tāve ghanavendu,
bayalabom'mada ham'mina nem'mugeviḍidu,
sahaja samādhāna śivaikyara haḷidu nuḍivaru.
Ādiyalli ahaṁ brahmavendu brahmane vidhiyādanu.
Haragaṇaṅgaḷoḷage agragaṇya gaṇēśvaranaha
Nandikēśvarana udāsīnaṁ māḍi,
ā nandikērśavarana śāpadinda sanutkumārane vidhiyādanu.
Karmave adhikavendu kem'mane keṭṭa hem'meyalli,
dvija munigaḷa nerahi kratuva māḍi,
ā dēva munigaḷoḷagāgi,
dakṣaṅge banda apāyavanaridu maredarallā.
Kubēranindadhikavaha dhana,
dēvēndranindadhikavaha aiśvarya,
sūryanindadhikavaha tējas'su,
gaja paṭauḷi sītāṅganegatyadhikavaha
rūpu lāvaṇya saundaryavanuḷḷa strīyaruṇṭu.
Kōṭividyadalli nōḍuvaḍe
Sahasravēdiyenisuva rāvaṇanu
pāradvārakicchaisi paravadhuvina
deseyindalēnādanariyare!
Tanu kobbina mana, mana
vikārada indriya viṣayaṅgaḷa
andaviḍida vikaḷateyalli
nuḍiva saṭegara kāyalarivave?
Nim'maya mana sannidhiyalli, intivellava
kaṇḍū kēḷiyū ariyaru.
Harana sadbhaktara kūḍe virōdhisi,
narakavanu munde anubhavisi,
indu apakhyātigoḷagāgi keṭṭuhōgabēḍa.
Atyadhika śivane satsadācāraviḍidu,
nityapadava paḍeyire maruḷa prāṇigaḷirā!
Keḍabēḍa, keḍabēḍa kēḷire ghāsi māḍuvanu nim'ma sōjiga.
Sadāśiva ballidanenna dēva mahāliṅga kallēśvaranu
tanna bhaktare keḍenuḍidavara biḍade daṇḍisuvanu.