Index   ವಚನ - 60    Search  
 
ದೀಕ್ಷಾಮೂರ್ತಿರ್ಗುರುರ್ಲಿಂಗಂ ಪೂಜಾಮೂರ್ತಿಃ ಪರಶ್ಶಿವಃ | ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕರ್ತಾ ಚ ಜಂಗಮಃ || ಎಂದುದಾಗಿ, ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ, ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು, ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು. ಅನ್ಯದೈವ ಪರವಧು ಪರಧನವಂ ಬಿಟ್ಟು, ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆ ಇಲ್ಲದೆ, ಏಕೋನಿಷ್ಠೆ ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು. ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ. ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ, ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ ಪ್ರಾಣಲಿಂಗಾರ್ಪಿತ. ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ, ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ. ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ, ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ. ಮನ ಬುದ್ಧಿ ಚಿತ್ತ ಅಹಂಕಾರದ ಗುಣವಳಿದು, ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ, ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ. ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು. ಸಪ್ತಧಾತುವಿನ ಉರವಣೆಯಂ ಮೆಟ್ಟಿ, ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ. ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು, ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು. ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು. ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ. ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ. ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ ಅಳವಡಿಸಿ ಮರೆದಿರಿ.