Index   ವಚನ - 55    Search  
 
ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ, ಖಣಿ ಗಾಣದ ನಡುವಿನ ತಿಲದಂತೆ, ಅಗ್ನಿ ಕುಂಭದ ನಡುವಿನ ಜೀವಪಾಕದಂತೆ, ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ. ಅದುಯೆಂತೆಂದಡ : ಜನನ ಮರಣವೆಂಬ ಯಂತ್ರದಲ್ಲಿ ತಿರುವಿ, ಹೊನ್ನು ಹೆಣ್ಣು ಮಣ್ಣೆಂಬ ಒರಳೊನಕಿಯ ನಡುವೆ ಹಾಕಿ ಕುಟ್ಟಿ, ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.