Index   ವಚನ - 56    Search  
 
ಒಂದೆಸೆಯಲ್ಲಿ ಹುಲಿ, ಒಂದೆಸೆಯಲ್ಲಿ ರಕ್ಷಿ, ನಡುವೆ ಬಂದು ಸಿಲ್ಕಿದ ಪಶುವಿನಂತೆ; ಒಂದೆಸೆಯಲ್ಲಿ ಕರಿ, ಒಂದೆಸೆಯಲ್ಲಿ ಭಲ್ಲೂಕ, ನಡುವೆ ಬಂದು ಸಿಲ್ಕಿದ ಎರಳೆಯಮರಿಯಂತೆ; ಒಂದೆಸೆಯಲ್ಲಿ ಕಾಕ, ಒಂದೆಸೆಯಲ್ಲಿ ಗಿಡುಗ, ನಡುವೆ ಬಂದು ಸಿಲ್ಕಿದ ಗಿಳಿಯಂತೆ. ಇಂತಿವು ಸ್ಥಿರವಿಲ್ಲದಂತೆ ಎನ್ನ ಬಾಳ್ವೆ. ಅದು ಎಂತೆಂದೊಡೆ: ಕಾಲವ್ಯಾಘ್ರನೆಂಬ ಹುಲಿ ಮರಣಕ್ಕೆ ಗುರಿಮಾಡಿ ನರಕಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ. ಮಾಯೆಯೆಂಬ ರಕ್ಷಿ ಜನನಕ್ಕೆ ಗುರಿಮಾಡಿ ಸುಖದುಃಖಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ. ಅಷ್ಟಮದವೆಂಬ ಕರಿ ಮೆಟ್ಟಿ ಕೊಲ್ಲುತ್ತಿಪ್ಪುದಾಗಿ. ಅರಿಷಡ್ವರ್ಗವೆಂಬ ಭಲ್ಲೂಕಂಗಳು ಹರಿದು ಹೀರಿ ಹಿಪ್ಪೆಯ ಮಾಡುತ್ತಿಪ್ಪುವಾಗಿ. ಮನವೆಂಬ ಕಾಗೆ ಕಂಡಕಡೆಗೆ ಹಾರಿ, ಅಜ್ಞಾನವೆಂಬ ಗಿಡುಗ ಅಂತರಂಗದೊಳುಲಿದಾಡಿ ಸುಜ್ಞಾನವ ಮರಸಿ ಕಾಡುತಿಪ್ಪುದು ನಿನ್ನ ಮಾಯೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.