Index   ವಚನ - 206    Search  
 
ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ ಭಂಡರನೆನಗೊಮ್ಮೆ ತೋರದಿರಯ್ಯಾ! ಹರಸ್ರಾವವೆಂದರೆ-ಗುರುವಿನ ಕರಕಮಲದಲ್ಲಿ ಹುಟ್ಟಿ ನರರ ತಂದೆತಾಯಿಗಳೆನಬಹುದೆ? ಎನಲಾಗದು. ನಿಮಗೆ ತಂದೆ ತಾಯಿಗಳೆಂದರೆ ಹೇಳುವೆ ಕೇಳಿರೊ. ಗುರುವೆ ತಾಯಿ, ಗುರುವೆ ತಂದೆ, ಗುರುವೆ ಬಂಧು, ಗುರುವೆ ಬಳಗ, ಗುರುವಿನಿಂದ ಅಧಿಕವಾಗಿಪ್ಪರು ಇನ್ನಾರೂ ಇಲ್ಲ. ಸಾಕ್ಷಿ: ಗುರುರ್ಮಾತಾ ಗುರುಃಪಿತಾ ಗುರುಶ್ಚ ಬಂಧುರೇವ ಚ | ಗುರುದೈವಾತ್‍ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ ||'' ಎಂದುದಾಗಿ, ಗುರುಪುತ್ರನಾಗಿ ನರರ ಹೆಸರ ಹೇಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.