Index   ವಚನ - 205    Search  
 
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಪರಶಿವನ ಪಂಚಮುಖವೆ ಪಂಚಕಳಸವೆಂದಿಕ್ಕಿ, ಹಸೆ-ಹಂದರದ ನಡುವೆ, ಶಿವಗಣಂಗಳ ಮಧ್ಯದಲ್ಲಿ ದೀಕ್ಷವನಿತ್ತು, ದೀಕ್ಷವೆಂಬೆರಡಕ್ಷರದ ವರ್ಮವನರುಹಿದ. ದೀಕಾರವೆ ಲಿಂಗಸಂಬಂಧವೆಂದು, ಕ್ಷಕಾರವೆ ಮಲತ್ರಯಂಗಳ ಕಳೆವುದೆಂದು ಅರುಹಿದ. ಸಾಕ್ಷಿ: ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ಶಿವದೀಕ್ಷಾಭಿಧೀಯತೇ ||'' ಎಂದುದಾಗಿ, ದೀಕ್ಷದ ವರ್ಮವನರುಹಿ, ಅರುಹೆಂಬ ಸೂತ್ರವ ಹಿಡಿಸಿ, ಮರವೆಂಬ ಮಾಯವ ಕಳೆದು, ಹಸ್ತಮಸ್ತಕ ಸಂಯೋಗ ಮಾಡಿ, ನೆತ್ತಿಯೊಳಿಹ ಪರಬ್ರಹ್ಮವಸ್ತುವ ಇಂತೆನ್ನ ಕರ ಉರ ಶಿರ ಮನ ಜ್ಞಾನದೊಳು ನೆಲೆಗೊಳಿಸಿ, ಪ್ರಣವಮಂತ್ರವ ಕರ್ಣದಲ್ಲಿ ಹೇಳಿ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ ಗುರು ಪರಮಾತ್ಮನಲ್ಲದೆ ನರನೆನಬಹುದೇ? ಎನಲಾಗದು. ಎಂದರೆ ಕುಂಭೀ ನಾಯಕ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.