Index   ವಚನ - 235    Search  
 
ಬರುತ ಬರುತ ಅರಣ್ಯದೊಳಗೊಂದು ಬಟ್ಟೆಯ ಕಂಡೆನು. ಆ ಬಟ್ಟೆಯಗೊಂಡು ಬರುತಲೊಂದು ಸಾಗರವ ಕಂಡೆನು. ಸಾಗರದ ನಡುವೊಂದೂರ ಕಂಡೆನು. ಊರಮುಂದೊಂದು ಭವಹರವೆಂಬ ವೃಕ್ಷವ ಕಂಡೆನು. ಆ ವೃಕ್ಷವನಾರಾಧಿಸಿದರೆ ಪರಮಾರ್ಥವೆಂಬ ಹಣ್ಣ ಕರದೊಳಗೆ ಧರಿಸಿತ್ತು ನೋಡಾ. ಕರದ ಹಣ್ಣು ಉರವ ತಾಗಿ, ಉರದ ಹಣ್ಣು ಶಿರವ ತಾಗಿ, ಶಿರದ ಹಣ್ಣು ಮನವ ತಾಗಿ, ಮನದ ಹಣ್ಣು ಭಾವವ ತಾಗಿ, ಭಾವದ ಹಣ್ಣು ಸರ್ವಕರಣಂಗಳನೆಲ್ಲವ ತಾಗಿ, ಸರ್ವಾಂಗದೊಳು ಪರಿಪೂರ್ಣವಾದುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ!