Index   ವಚನ - 246    Search  
 
ಹಸಿಹಂದರದಿ ಪಡೆದ ಗಂಡನ ವಂಚಿಸಿ, ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ, ಪಂಚಕಳಸವಿಕ್ಕಿ ದೇವಭಕ್ತರ ನಡುವೆ ಹಸ್ತಮಸ್ತಕ ಸಂಯೋಗವ ಮಾಡಿ ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ, ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ ಪಂಚಮಹಾಪಾತಕರ ನೋಡಾ! ಸಾಕ್ಷಿ: “ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ | ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ. ಸಾಕ್ಷಿ: “ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ| ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||'' ಎಂದುದಾಗಿ. ಇಂತೆಂಬುದನರಿಯದೆ, ಅಜ್ಞಾನದ ಭ್ರಾಂತಿಯಲ್ಲಿ ಅನ್ಯಲಿಂಗವನಾಶ್ರಯಿಸುವ ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.