Index   ವಚನ - 249    Search  
 
ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ. ಭವಿಗೆ ಶೈವ, ಭಕ್ತಂಗೆ ವೀರಶೈವ. ಭವಿ ಶೈವಲಿಂಗವ ಪೂಜೆಮಾಡಿದರೆ ಅವರ ಭಾವಕ್ಕೆ ಒಲಿವನಲ್ಲದೆ, ಶಿವಭಕ್ತ ಶೈವಲಿಂಗವ ಪೂಜೆಮಾಡಿದರೆ ತಪ್ಪದು ನರಕ. ಅದು ಕಾರಣವೆಂದರೆ: ಶಿವಲಿಂಗ ಕರಸ್ಥಲದಲ್ಲಿರುತಿರೆ ಆ ಲಿಂಗದ ಪೂಜೆಯ ಮಾಡಿ, ವರವ ಪಡೆಯಲರಿಯದೆ, ಅನ್ಯಲಿಂಗಕ್ಕೆ ಹರಿದು ಹೋಗಿ, ಗಡಗಡನುರುಳಿ, ಆ ಲಿಂಗದೇವಾಲಯವ ಪ್ರದಕ್ಷಿಣ ಮಾಡಿದರೆ, ಕುನ್ನಿ ಬೂದಿಯೊಳಗೆ ಹೊರಳಿ ಲಟಪಟನೆ ಝಾಡಿಸಿ ಎದ್ದು ತುಡುಗಿಗೆ ಮನೆಯೊಳು ಹೊಕ್ಕು ಸುತ್ತುತಿರೆ ನಡುನೆತ್ತಿಯ ಮೇಲೆ ಬಡಿವಂತೆ, ಏನೆಂದು ಸಟೆಮಾಡನಯ್ಯಾ ಇಂತಪ್ಪ ಅಜ್ಞಾನಿಗಳ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?