ನೆತ್ತಿಯಲ್ಲಿ ಶ್ರೀ ವಿಭೂತಿಯ ಧರಿಸಿ
ಮಿಥ್ಯದೈವಕೆರಗದ ಭಾಷೆ.
ನಯನದಲ್ಲಿ ಶ್ರೀ ವಿಭೂತಿಯ ಧರಿಸಿ
ಪರಧನ ಪರಸ್ತ್ರೀಯರ ನೋಡದ ಭಾಷೆ.
ಭಾಳೊಳು ವಿಭೂತಿಯ ಧರಿಸಿ
ಗಂಧ ಚಂದನಾದಿಗಳ ಪೂಸದ ಭಾಷೆ.
ಕರ್ಣದಲ್ಲಿ ವಿಭೂತಿಯ ಧರಿಸಿ ಶಿವನಿಂದ್ಯವ ಕೇಳದ ಭಾಷೆ.
ನಾಸಿಕದಲ್ಲಿ ವಿಭೂತಿಯ ಧರಿಸಿ
ಲಿಂಗಸಂಗವಲ್ಲದನ್ಯವ ವಾಸಿಸದ ಭಾಷೆ.
ಜಿಹ್ವೆಗೆ ಶ್ರೀ ವಿಭೂತಿಯ ಧರಿಸಿ
ಲಿಂಗ ಜಂಗಮ ಪ್ರಸಾದವಲ್ಲದನ್ಯವ ಸೇವಿಸದ ಭಾಷೆ.
ಕಂಠದಲ್ಲಿ ವಿಭೂತಿಯ ಧರಿಸಿ
ಅನ್ಯಕೆ ಸೆರಗೊಡ್ಡದ ಭಾಷೆ.
ಭುಜದಲ್ಲಿ ವಿಭೂತಿಯ ಧರಿಸಿ
ಸತ್ಯ ಸದಾಚಾರವ ಭುಜಗೊಟ್ಟಾನುವ ಭಾಷೆ.
ತೋಳಿನಲ್ಲಿ ವಿಭೂತಿಯ
ಧರಿಸಿ ಪರಧನವನಪ್ಪದ ಭಾಷೆ.
ಮುಂಗೈಯಲ್ಲಿ ವಿಭೂತಿಯ ಧರಿಸಿ
ಅನ್ಯರಿಗೆ ಕೈಯೊಡ್ಡಿ ಬೇಡದ ಭಾಷೆ.
ಅಂಗೈಯಲ್ಲಿ ವಿಭೂತಿಯ ಧರಿಸಿ
ಲಿಂಗವಲ್ಲದನ್ಯದೈವವ ಪೂಜಿಸದ ಭಾಷೆ.
ಇಂತಿವು ಮುಖ್ಯವಾದ ಸ್ಥಾನಂಗಳಲ್ಲಿ
ಶ್ರೀ ವಿಭೂತಿಯನೊಲಿದು ಧರಿಸಿ
ಶಿವಸತ್ಯ ಶಿವದೇಹಿಯಾದೆ ನೋಡಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.