ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ,
ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ.
ಶ್ರೀ ವಿಭೂತಿಯ ಹೂಸದೆ, ಶ್ರೀ ರುದ್ರಾಕ್ಷಿಯ ಧರಿಸದೆ,
ಶ್ರೀ ಪಂಚಾಕ್ಷರಿಯ ನೆನೆಯದೆ
ಶಿವಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣಿರಣ್ಣಾ!
ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪವಹುದೆ?
ಮುಕ್ಕಣ್ಣನ ಆಭರಣವೆನಿಸುವ ಭಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ
ಭವದಗ್ಧವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.