Index   ವಚನ - 137    Search  
 
ಮತ್ತಂ, ಪ್ರಣವಭೇದ ನಿರೂಪಣಾನಂತರದಲ್ಲಿ ಅಂಗಭೇದಮಂ ಪೇಳ್ವೆನೆಂತೆನೆ- ಶಿವಾಂಗ ಭೂತಾಂಗ ವಿದ್ಯಾಂಗ ಕೂಪಾಂಗ ಶಕ್ತ್ಯಂಗ ಸಾಮಾನ್ಯಂಗಂಗಳೆಂದಾರು ತೆರನೀ ಷಡಂಗಾಕ್ಷರಂಗಳಲ್ಲಿ ನಾದಬ್ರಹ್ಮಂ ಪರಿಪೂರ್ಣವಾಗಿಹುದಾ ಷಡಂಗಂಗಳಲ್ಲಿ ಮೊದಲ ಶಿವಾಂಗಕ್ಕೆ ವಿವರಂ- `ಆ ಈ ಊ ೠ ಌ ಐ ಔ ಅಂ ಅಃ' ಎಂಬೀಯೊಂಬತ್ತ್ತು ವಿಕೃತಾಕ್ಷರಂಗಳಲ್ಲಿ ನಾಲ್ಕನೆಯ ೠಕಾರಮಂ ಐದನೆಯ ಌ ಕಾರಮಂ ಎಂಟನೆಯ ಅಂ ಎಂಬ ಈ ಮೂರಕ್ಕರಮಂ ಬಿಟ್ಟು ಉಳಿದಾರಕ್ಕರಮಂ ಶಿವ ಸಂಜ್ಞಿತವಾದ ಹಕಾರದೊಡನೆ ಕೂಡಿಸೆ ಹಾಂ ಹೀಂ ಹೂಂ ಹೈಂ ಹೌಂ ಹಃ ಎಂಬೀ ಶಿವಷಡಂಗಮಂತ್ರವೆ ರಕಾರದಿಂ ಪೊರಗಪ್ಪುದರಿಂ ತಾಂತ್ರಿಕ ಶಿವಷಡಂಗವೆನಿಕುಂ. ರಕಾರದೊಡನೆ ಕೂಡಿ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಎಂಬ ವೈದಿಕ ಶಿವಷಡಂಗಮಂತ್ರವೆನಿಸುಗು ಮೀಯುಭಯ ಮಂತ್ರಕ್ಕಂ ಭೇದವಿಲ್ಲವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.