Index   ವಚನ - 139    Search  
 
ಮತ್ತಂ, ಶಿವಾಂಗಮಂತ್ರ ನಿರೂಪಣಾನಂತರದಲ್ಲಿ, ಭೂತಾಂಗಮಂತ್ರಮಂ ಪೇಳ್ವೆನೆಂತೆನೆ- ಪೃಥ್ವೀಬೀಜವಾದ ಲಕಾರಮಂ ಜೀವಬೀಜವಾದ ಹಕಾರದೊಡನೆ ಕೂಡಿ ಅದನೆರಡನೆಯ ಸ್ವರದೊಡನೆ ಸಂಯೋಗಿಸಿದ ಬಿಂದು ನಾದ ಸಂಜ್ಞಿಕನಾದ ಸೊನ್ನೆಯಂ ಬೆರಸೆ ಹ್ರಾಂ ಎಂದಾಯಿತ್ತು. ಶಿವಸಂಜ್ಞಿಕವಾದ ಹಕಾರದೊಡನೆ ಜಲಬೀಜವಾದ ವಕಾರಮಂ ನಾಲ್ಕನೆಯ ಸ್ವರವಾದೀಕಾರದೊಡನೆ ಕೂಡಿ ಶಿವಶಕ್ತಿ ಸಂಜ್ಞಿಕವಾದ ಸೊನ್ನೆಯಂ ಬೆರಸಿ ಹ್ರೀಂ ಎಂದಾಯಿತ್ತು. ಷಷ್ಠ ಸಂಜ್ಞಿಕ ರಕಾರಮಂ ಪಂಚಮ ಸಂಜ್ಞಿಕ ಹಕಾರದೊಳ್ಬೆರಸಿ ಸ್ಪರಪಂಚಮಾಂತವಾದೂಕಾರದೊಳಾ ಹಕಾರಮಂ ಕೂಡಿ ಯಾಧಾರಾಧೇಯ ಸಂಜ್ಞಿಕ ಬಿಂದುವಿನೊಡವೆರಸೆ ಹ್ರೂಂ ಎಂದಾಯಿತ್ತು. ವಾಯುಬೀಜವಾದ ಯಕಾರದೊಡನೆ ಕೂಡಿದ ಭೂತಾಂತ ಸಂಜ್ಞಿಕವಾದ ಹಕಾರಮಂ ಸ್ವರೈಕಾದಶಾಂತವಾದೈಕಾರದೊಡನೆ ಕೂಡಿಸಿ ಪರಾಪರ ಸಂಜ್ಞಿಕವಾದ ಸೊನ್ನೆಯೊಳ್ಬೆರಸೆ ಹ್ರ್ಯೇಂ ಎಂದಾಯಿತ್ತು. ತತ್ವಾಂತ ಸಂಜ್ಞಿಕವಾದ ಹಕಾರಮಂ ತತ್ವಾಂತವಾದ ದ್ವಯಕ್ಕರಮಂ ಕಲಾಸಂಜ್ಞಿಕವಾದೌಕಾರದೊಡನೆ ಕೂಡಿಸಿ ಕಾರ್ಯಕಾರಣಸಂಜ್ಞಿಕವಾದ ಸೊನ್ನೆಯೆಂ ಕೂಡಿಸೆ ಹ್ರೌಂ ಎಂದಾಯಿತ್ತು. ಶಕ್ತಿ ಸಂಜ್ಞಿಕವಾದ ಸಕಾರದ ಕಡೆಯ ಹ್ ಎಂಬ ಹಕಾರಂ ಮತ್ತೆಯುಂ ಶಿವಸಂಜ್ಞಿಕವಾದ ಹ್ ಎಂಬ ಹಕಾರಮಿವೆರಡರೊಳ್ ಮೊದಲ ಹ್‍ಕಾರಂ ಆದಿಬೀಜ ಸಂಜ್ಞಿಕವಾದಕಾರದೊಡನೆ ಕೂಡಿ ಹಹ್ ಎಂದಾಯಿತ್ತಿ- ವೆರಡರ ಮದ್ಯದೊಳ್ಬಿಂದು ಬರೆ ಹಂಹ್ ಎಂದಾಯಿತ್ತು. ಇದು ಛೇದ್ಯಸಂಜ್ಞಿಕವಾದಸ್ತ್ರಮಂತ್ರದೊಡನೆ ಕೂಡಿ ಐದು ಭೂತಗ್ರಂಥಿಯೊಡನೆ ಕೂಡಿಹ ಭೂತಾಂಗಬೀಜಮಾತ್ಮನಲ್ಲಿರುತ್ತಿಹುದೀ ತೆರದಿಂ ಹ್ರಾಂ ಹ್ರೀಂ ಹ್ರೂಂ ಹ್ರ್ಯೇಂ ಹ್ರೌಂ ಹಂಹ್ ಎಂದಾರು ಭೇದಮಾದ ಭೂತಾಂಗಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.