Index   ವಚನ - 151    Search  
 
ಪಂಚಕಳಸ ಪಂಚಕಳಸ ಎಂದೆಂಬರು ನೋಡಯ್ಯ, ಪಂಚಕಳಸಕ್ಕೆ ಹಿರಿದಾವುದು ಕಿರಿದಾವುದು ಎಂದರಿಯರು. ಪಂಚಕಳಸದ ನಾಲ್ವರ ನಡುವೆ ಇಪ್ಪುದೀಗಲೆ ಆ ನಾಲ್ಕಕ್ಕೆ ಗುರು ಬಸವೇಶ್ವರನು. ಆ ನಾಲ್ಕಕ್ಕೆ ದೀಕ್ಷೆ ಕೊಟ್ಟಾತನೀಗಲೆ ಗುರು ಬಸವೇಶ್ವರನು. ಆ ನಾಲ್ವರಾರೆಂದರೆ- ರೇವಣಸಿದ್ಧೇಶ್ವರ, ಮರುಳಸಿದ್ಧೇಶ್ವರ, ಏಕೋರಾಮೇಶ್ವರ, ಪಂಡಿತಾರಾಧ್ಯ ಇಂತೀ ನಾಲ್ವರಿಗೆ ಗುರು ಬಸವೇಶ್ವರನು. ರೇವಣಸಿದ್ಧೇಶ್ವರಗೆ ಚಿನ್ನದ ಲಿಂಗವ ಕೊಟ್ಟ ಕಾರಣದಿಂದ ಬಸವೇಶ್ವರನೆ ಗುರುವಾದ. [ಮರಳುಸಿದ್ಧೇಶ್ವರಗೆ] ಬೆಳ್ಳಿಯ ಲಿಂಗವ ಕೊಟ್ಟ ಕಾರಣದಿಂದ ಬಸವೇಶ್ವರನೆ ಗುರುವಾದ. ಏಕೋರಾಮೇಶ್ವರಗೆ ತಾಮ್ರದ ಲಿಂಗವ ಕೊಟ್ಟ ಕಾರಣದಿಂದ [ಬಸವೇಶ್ವರನೆ ಗುರುವಾದ] ಪಂಡಿತಾರಾಧ್ಯರಿಗೆ ಶಿಲೆಯ ಲಿಂಗವ ಕೊಟ್ಟ ಕಾರಣದಿಂದ ಬಸವೇಶ್ವರನೆ ಗುರುವಾದ. [ಇಂತು] ನಿಮ್ಮ ಶರಣ ಬಸವಣ್ಣನು ಪರಮಗುರುವಾದ ಕಾಣಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.