Index   ವಚನ - 41    Search  
 
ಸಮಸ್ತ ದೋಷ ರಹಿತವಾದ ಶುದ್ಧ ತತ್ವವಾದರಿವೆ ‘ಶಿವ’ನೆಂದು ಸಮಸ್ತ ತತ್ವಗಳಿಂದಲೂ ಮೇಲಣ ತತ್ವವಾದುದಾಗಿ ‘ಪರಾತ್ಪರ’ವೆಂದು ವ್ಯೋಮಾತೀತವಾಗಿ ದೃಗ್ದೃಶ್ಯಂಗಳಿಗೆ ನಿಲುಕದ ವಸ್ತುವಾದ ಕಾರಣ ‘ಸೂಕ್ಷ್ಮ’ವೆಂದು ಬಿಂದು ಮಾಯಿಗಳೆಂಬ ಉಪಾದನ ಕಾರಣ ಜಗದ್ರೂಪವಾದ ಮಹಾ ಕಾರ್ಯ ಇಂತೀ ಕಾರ್ಯ ಕಾರಣಗಳಿಗೆ ತಾನು ಪರಮಾಕಾರವಾದುದಾಗಿ ‘ನಿತ್ಯ’ವೆಂದು ವಿಶ್ವದಲ್ಲಿ ವ್ಯಾಪಕವಾಗಿಪ್ಪುದರಿಂದ ‘ಸರ್ವಗತ’ವೆಂದು ಎಲ್ಲಾ ತತ್ವಂಗಳ ಹಾಂಗೆ ಕ್ಷೀಣವಲ್ಲದುದಾಗಿ ‘ಅವ್ಯಯ’ ವೆಂದು ಮಲತ್ರಯರಹಿತವಾದುದಾಗಿ ‘ಅನಿಂದಿತ’ವೆಂದು ಎಲ್ಲಾ ತತ್ವಂಗಳು ಒಂದರೊಡನೆ ಹೋಲಿಸಲು ತಕ್ಕವು, ಶಿವತತ್ವವು ಒಂದರೊಡನೆ ಹೋಲಿಸಲು ತಕ್ಕುದಲ್ಲವಾಗಿ ‘ಅಸಾಮ್ಯ’ವೆಂದು ಕಿಂಚಿದರಪ್ಪ ಬ್ರಹ್ಮಾದಿಗಳು ಅರಿವ ಪ್ರಮಾಣಗಳಿಗೆ ಮೀರಿ ತೋರುವದಾಗಿ ‘ಅಪ್ರಮಾಣ’ವೆಂದು ಗುಣತ್ರಯ ಮೀರಿದ ವಿಶೇಷದಿಂದ ‘ಅನಾಮಯ’ವೆಂದು ಹೀಂಗೆ ದಶಲಕ್ಞಣವನುಳ್ಳದ್ದು ‘ಶಿವಸ್ವರೂಪ’ವೆಂದು ‘ವಾತುಳತಂತ್ರ’ ಮೆರೆವುದಯ್ಯ ಶಾಂತವೀರೇಶ್ವರಾ