ಸಂಸಾರವೆಂಬ ಹೆಸರನುಳ್ಳ ಪ್ರಸಿದ್ಧವಾದ ಮರನುಂಟು.
ಆ ಸಂಸಾರವೆಂಬ ವೃಕ್ಷಕ್ಕೆ ಮನಸ್ಸೇ ಬೇರು,
ಕಾಮವೆಂಬ ಹೆಗ್ಗೊಂಬು,
ಕ್ರೋಧ ಲೋಭ ಮೊದಲಾದ
ಅರಿಷಡ್ವರ್ಗಂಗಳೆಂಬಕೋಂಟೆಯು
ಅತ್ಯಂತ ಆಸೆ ಎಂಬ ಎಲೆಯು,
ದುಃಖವೆಂಬ ಹೆಸರುಳ್ಳ ಪುಷ್ಪವು,
ಈ ಪ್ರಕಾರದಲ್ಲಿ ಸಂಸಾರವೆಂಬ ವೃಕ್ಷವು.
ಫಲವಿಲ್ಲದುದಾಗಿ ಒಪ್ಪುತ್ತಿಹುದಯ್ಯ! ಎಲೆ ಪರಮೇಶ್ವರನೆ,
ಆ ಸಂಸಾರವೆಂಬ ವಿಷವೃಕ್ಷವು ಎಲ್ಲಾ ಕಡೆಯಲ್ಲಿಯು
ಭಯವನು ಹುಟ್ಟಿಸುವಂಥದ್ದು.
ನಿನ್ನ ಭಕ್ತಿ ಎಂಬ ಕುಠಾರದಿಂದ ಛೇದಿಸಬಹುದು.
ಶಿವಭಕ್ತಿಯಿಲ್ಲದೆ ಛೇದಿಸಲಾಗದು; ಅದು ಕಾರಣವಾಗಿ
ಪರಮೇಶ್ವರನ ಭಕ್ತಿಯೆ ಸಂಸಾರ ವೃಕ್ಷಕ್ಕೆ ಕುಠಾರವಲ್ಲದೆ
ಉಳಿದ ಇತರ ಬ್ರಹ್ಮ ವಿಷ್ಣಾದಿಗಳ ಭಕ್ತಿ ಎಲ್ಲವೂ ವ್ಯರ್ಥವೆಂದರ್ಥವಯ್ಯ,
ಶಾಂತವೀರೇಶ್ವರಾ