Index   ವಚನ - 98    Search  
 
ಲೋಕದಲ್ಲಿ ಪ್ರಸಿದ್ಧವಾದ ಲೋಭ ಮೋಹಗಳ ಬಿಟ್ಟ, ಆತ್ಮ ತತ್ತ್ವದ ವಿಚಾರವ ಬಲ್ಲ, ಬಿಟ್ಟ ವಿಷಯ ಭ್ರಾಂತಿ ದೂರನಾದ, ಶಿವಾಗಮೋಕ್ತವಾದ ತತ್ತ್ವ ರೂಪವನು ಅರಿವುತ್ತಿರ್ದ, ಬಿಟ್ಟ ಸಂದೋಹ ಭ್ರಾಂತಿ ದೂರನಾದ, ಸಕಲ ಶಿವಾಗಮಂಗಳ ಪ್ರಯೋಗವನು ಬಲ್ಲ, ಧರ್ಮಿಷ್ಟನಾಗಿ ಸತ್ಯವನು ನುಡಿವ, ಗುರುವಂಶ ಕ್ರಮದಿಂದ ಬಂದ ಸದಾಚಾರವುಳ್ಳ, ದುರ್ಮಾರ್ಗವಾದ ಆಚಾರಗಳ ಬಿಟ್ಟ, ಶಿವಧ್ಯಾನದಲ್ಲಿ ತತ್ಪರನಾಗಿ ರಾಗ ದ್ವೇಷ ರಹಿತನಾಗಿರ್ದ, ಪರತತ್ತ್ವ ವಿವೇಕವುಳ್ಳ ಭಸ್ಮೋದ್ಧೂಳನದಲ್ಲಿ ಕುಶಲನಾದ, ಭಸ್ಮತತ್ತ್ವದಲ್ಲಿ ವಿವೇಕವುಳ್ಳ, ತ್ರಿಪುಂಡ್ರವನು ಧರಿಸುವಲ್ಲಿ ಲವಲವಿಕೆಯುಳ್ಳ, ರುದ್ರಾಕ್ಷೆ ಮಾಲೆಯ ಧರಿಸಿದ, ಭಾಹ್ಯಾಂತರ್ಗತವಾದ ಲಿಂಗಧಾರಣೆಯೊಡನೆ ಕೂಡಿರ್ದ ಬಾಹ್ಯಂತರಗತವಾದ ಲಿಂಗಪೂಜೆಯಲ್ಲಿ ತತ್ಪರನಾಗಿರ್ದ, ಲಿಂಗಾಂಗ ಸ್ವರೂಪರಾದ ಶಿವಾತ್ಮರ ಯೋಗ ತತ್ತ್ವವನರಿಯುತ್ತಿರ್ದ ಹುಟ್ಟುತ್ತಿರ್ದ ಶಿವಾದ್ವೈತ ವಾಸನೆಯುಳ್ಳ, ಲಂಗಸ್ಥಲ ಅಂಗಸ್ಥಲಂಗಳ ಭೇದವನರಿವುತ್ತಿರ್ದ, ಶಿವಶಬ್ದ ವಾಚ್ಯಾವಾದ ಮಹಾಲಿಂಗವನು ಸಾಕ್ಷಾತ್ಕರಿಸಿ ಉಪದೇಶವ ಮಾಡುವ ಶ್ರೀ ಗುರುಸ್ವಾಮಿಯನು ಸಂಸಾರ ಹೇಯವುಳ್ಳ ಪಕ್ವ ಕರ್ಮವುಳ್ಳ ಶಿಷ್ಯನು ಎಯ್ದುತ್ತಿರ್ದನಯ್ಯ ಶಾಂತವೀರೇಶ್ವರಾ