Index   ವಚನ - 418    Search  
 
ಭರಿತಾರ್ಪಣವೆಂದು ಸಕಲ ಪದಾರ್ಥವನು ಒಂದು ವೇಳೆ ಗಂಗಳ ತುಂಬ ಪಟುಭಟರಂತೆ ಒಟ್ಟಿಸಿಕೊಂಡು ಲಿಂಗಕ್ಕೆ ಕೊಟ್ಟೆವು ಲಿಂಗ ಪ್ರಸಾದವಾಯಿತ್ತೆಂದು ಸೆಜ್ಜೆಯಲ್ಲಿದ್ದ ಲಿಂಗವನು ವಸ್ತ್ರಗಳಿಂದ ಬಂಧಿಸಿಕೊಂಡು ಮತ್ತೊಂದು ಪದಾರ್ಥ ಬಂದರೆ ಲಿಂಗಕ್ಕೆ ಕೊಟ್ಟು ಕೊಳಲರಿಯರಯ್ಯ. ಆ ಪದಾರ್ಥವ ಕಂಡು ಮನದಲ್ಲಿ ಬಯಸಿ ಬಿಟ್ಟು ಬಿಡರು ಉಂಡು ಉಣ್ಣರು. ಮನದ ಕಾಂಕ್ಷೆ ಹಿಂಗದೆ ಅದರಲ್ಲಿಯೆ ತೊಳಲುತ್ತ ಕೋಟಲೆಬಡುತ್ತಿಪ್ಪರಯ್ಯ, ಅದೇಕೆ ಲಿಂಗವ ಬಿಡಲಮ್ಮರು? ಕೈ ಏನು ಎಂಜಲೆ? ಕೈ ಎಂಜಲಾದವಂಗೆ ಬಾಯೆಲ್ಲ ಎಂಜಲು, ಬಾಯೆಂಜಲದವಂಗೆ ಸರ್ವಾಂಗವೆಲ್ಲ ಎಂಜಲು. ಎಂಜಲೆಂದರೆ ಅಮೇಧ್ಯದ ಮೇಲೆ ಲಿಂಗವನೇಕೆ ಧರಿಸಿಪ್ಪಿರಿ? ಈ ಸಂದೇಹಿಗಳು ಮೆಚ್ಚರಯ್ಯ ನಿಮ್ಮ ಶರಣರು ಶಾಂತವೀರೇಶ್ವರಾ