Index   ವಚನ - 485    Search  
 
ಚಿತ್ತ ಪ್ರಾಣವಾಯು ನಾಶಿಕ ಗಂಧ ವಾಯುವೆಂಬ ಭೂಮಿ ಪಂಚಕದಲ್ಲಿ ಆಚಾರಲಿಂಗ ಸಂಬಂಧ. ಬುದ್ಧಿ ಅಪಾನವಾಯು ಜಿಹ್ವೆ ರಸ ಗುಹ್ಯವೆಂಬ ಜಲ ಪಂಚಕದಲ್ಲಿ ಗುರುಲಿಂಗ ಸಂಬಂಧ. ಅಹಂಕಾರ ವ್ಯಾನವಾಯು ನೇತ್ರ ರೂಪ ಪಾದವೆಂಬ ಅಗ್ನಿಪಂಚಕದಲ್ಲಿ ಶಿವಲಿಂಗ ಸಂಬಂಧ. ಮನಸ್ಸು ಉದಾನವಾಯು ತ್ವಕ್ಕು ಸ್ಪರ್ಶ ಪಾಣಿ ಎಂಬ ವಾಯು ಪಂಚಕದಲ್ಲಿ ಜಂಗಮಲಿಂಗ ಸಂಬಂಧ. ಜ್ಞಾನ ಸಮಾನವಾಯು ಶ್ರೋತ್ರ ಶಬ್ದ ವಾಕ್ಕೆಂಬ ವ್ಯೋಮ ಪಂಚಕದಲ್ಲಿ ಪ್ರಸಾದಲಿಂಗ ಸಂಬಂಧ. ಆತ್ಮ ಹೃದಯ ಮನ ತೃಪ್ತಿಗಳಲ್ಲಿ ಮಹಾಲಿಂಗ ಸಂಬಂಧ. ಹೀಂಗೆ ಸರ್ವಾಂಗಳದಲ್ಲಿಯಾ ಪ್ರಾಣಲಿಂಗ ಪರಿಪೂರ್ಣವಾಗಿದ್ದಾತನೆ ಪ್ರಾಣಲಿಂಗಿಯಯ್ಯ ಶಾಂತವೀರೇಶ್ವರಾ