ಜ್ಯೋತಿರ್ಮಯವಾಗಿ ಹೃತ್ಕಮಲ ಮಧ್ಯದಲ್ಲಿರುವ
ಶಿವಸ್ವರೂಪವಾದ ಸರ್ವೋತ್ಕರ್ಷವಾದ
ಪ್ರಾಣ ಲಿಂಗವನು ಬಿಟ್ಟು ಬಾಹ್ಯಲಿಂಗದಲ್ಲಿ ತತ್ಪರರಾದವರು
ವಿಶೇಷವಾದ ಮೂಢರೆನಿಸಿಕೊಂಬರು.
ಆವನಾನೊಬ್ಬನು ಬಾಹ್ಯ ಲಿಂಗ
ಪೂಜಾದಿಗಳಲ್ಲಿ ಅಡ್ಡಲಾದ ಮುಖವುಳ್ಳಾತನಾಗಿ
ಎಲ್ಲ ಕಾಲದಲ್ಲಿಯೂ
ಆಭ್ಯಂತರದಲ್ಲಿ ಚಿದ್ರೂಪವಾದ ಪ್ರಾಣಲಿಂಗ ವಿಚಾರ
ಉಳ್ಳವನಾಗಿರುವನು ಆ ಶಿವಯೋಗೀಶ್ವರನು
ಪ್ರಾಣಲಿಂಗಿ ಎಂದು ಹೇಳುವರಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಪ್ರಾಣಲಿಂಗ ಸಂಬಂಧದಲ್ಲಿ ಸಮರಸವೆನೆಯ್ದಿದ ಪ್ರಾಣಲಿಂಗಿಯ ಪ್ರಾಣಲಿಂಗ ಪೂಜಾಕ್ರಮವು ಹೇಂಗೆಂತೆನೆ ಮುಂದೆ ‘ಪ್ರಾಣಲಿಂಗಾರ್ಚನೆಯಸ್ಥಲ’ವಾದುದು.