Index   ವಚನ - 530    Search  
 
ಮತ್ತಮಾ ಪ್ರಾಣ ಬಿಡುವಾತನ ಪ್ರಾಣವಿದ್ದಾಗಲೆ, ಪಾದದ ಹೆಬ್ಬೆರಳೊತ್ತಿನ ಬೆರಳಿಗೂ ಹಿಮ್ಮಡಕ್ಕೂ ಅಳೆದುಕೊಂಡು ಒಂದು ಪ್ರಮಾಣದ ಕಡ್ಡಿಯ ಮಾಡಿ ಅದರಿಂದ ಒಂಬತ್ತು ಪಾದ ಪ್ರಮಾಣಿನ ಒಂದು ಕಡ್ಡಿಯ ಎರಡು ಪಾದದಳತೆಯದೊಂದು ಕಡ್ಡಿಯ ಮಾಡಿಕೊಂಡು ಮೂರು ಪಾದದಳತೆಯದೊಂದು ಕಡ್ಡಿಯ ಮಾಡಿಕೊಂಡು ಐಯ್ದು ಪಾದದಳತೆಯ ಒಂದು ಕಡ್ಡಿಯ ಮಾಡಿಕೊಂಡು ನಾಲ್ಕು ಮೂಲೆಯನು ಐದು ಪ್ರಮಾಣಿನ ಕಡ್ಡಿಯಿಂದಳೆದು ನಾಲ್ಕು ಮೂಲೆಯಲ್ಲಿ ನಾಲ್ಕು ಗೂಡವ ನೆಡಿಸಿ ಈ ಗೂಟಗಳಿಗೆ ಹೆಚ್ಚು ಕಡಿಮೆಯಾಗದ ಹಾಂಗೆ ಕತ್ತರಿನೂಲಹಾಕಿ ಪ್ರಮಾಣಿಸಿ ಆ ಸಮಾಧಿಯ ಅಯ್ದು ಪಾದದೊಳಗೆ ಎಡಕೊಂದು ಪಾದ ಬಲಕೊಂದು ಪಾದವ ಬಿಟ್ಟು ನಡುವೆ ಮೂರು ಸೋಪಾನಕ್ಕೆ ಮೂರು ಪಾದಗಳ ಆರು ಪಾದದೂಚದ ಮೂರು ಸೋಪಾನ[ವ] ಆ ಸಮಾಧಿಯೊಳಗೆ ಬಳಸಿ ಒಂದು ಪಾದ ಪ್ರಮಾಣವ ಬಿಟ್ಟು ಆ ಜಗಲಿಯ ಮೇಲೆ ಎಂಟು ಪಾದದೂಚ ಕೆಳಗೆ ಒಂದು ಪಾದದೂಚದ ವೇದಿಕೆಯನು ಮಾಡುವುದಯ್ಯ ಶಾಂತವೀರೇಶ್ವರಾ