Index   ವಚನ - 654    Search  
 
ಮತ್ತಮಾ ಸ್ವಾಯತದೀಕ್ಷೆಯು ಮೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ: ಗುರುಶಿಷ್ಯನ ಮಸ್ತಕದಲ್ಲಿ ಆಗಮೋಕ್ತ ವಿಧಾನದಿಂ ಶಿವಾಸನವನು ಧ್ಯಾನಿಸಿ ಅಲ್ಲಲ್ಲಿ ಆವುದಾನೊಂದು ಶಿವತತ್ತ್ವ ಸಮಾವೇಶಗೊಳಿಸುವುದು ‘ವೇಧಾದೀಕ್ಷೆ’ ಎನಿಸುವುದು. ದೇವಾತಾದಿಗಳು ಸಹವಾಗಿ ಮಂತ್ರೋಪದೇಶವನು ಮಾಡುವದು ‘ಮಂತ್ರದೀಕ್ಷೆ’ ಎನಿಸುವುದು. ದಿವ್ಯೋತ್ರರ ಕ್ರಿಯೆಗೂಡಿ ಪ್ರಾಣಲಿಂಗೋಪದೇಶವನು ಮಾಡುವುದು ‘ಕ್ರಿಯಾದೀಕ್ಷೆ’ ಎನಿಸುವುದು. ಮತ್ತಮಾ ಗುರು ಶಿಷ್ಯನ ಕರ್ಣದಲ್ಲಿ ಮಂತ್ರೋಪದೇಶವ ಮಾಡುವುದೆ ‘ಮಂತ್ರದೀಕ್ಷೆ’. ಶಿಷ್ಯನ ಹಸ್ತಕ್ಕೆ ಗುರುವು ಲಿಂಗವ ಕೊಡುವುದೆ ‘ಕ್ರಿಯಾದೀಕ್ಷೆ’ ಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ ‘ವೇಧಾದೀಕ್ಷೆ’ ಎನಿಸುವುದಯ್ಯ ಶಾಂತವೀರೇಶ್ವರಾ