Index   ವಚನ - 653    Search  
 
ಗುರುವಿನಾಜ್ಞಾ ಪಾಲನದಲ್ಲಿ ಸಮರ್ಥವಾದುದು ಆಜ್ಞಾ ದೀಕ್ಷೆ ಎನಿಸಿಕೊಂಬುದು. ಪುರಾತನರ ಸದಾಚಾರಕ್ಕೆ ಸದೃಶವಾದುದು ‘ಉಪಮಾ ದೀಕ್ಷೆ’ ಸ್ವಸ್ತಿಕವೆಂಬ ಮಂಡಲದ ಮೇಲೆ ಶಿಷ್ಯನು ಕುಳ್ಳಿರಿಸಿ ಮಂತ್ರ ನ್ಯಾಸಮಂ ಮಾಡಿ ಮಂತ್ರ ಪಿಂಡವಾಗಿ ಮಾಡುವುದು ಸ್ವಸ್ಥಿಕಾರೋಹಣ’ ಆಗಮೋಕ್ತ ಸ್ಥಾನಂಗಳಲ್ಲಿ ತನ್ಮಂತ್ರಗಳಿಂ ವಿಭೂತಿಯ ಧಾರಣವು ‘ವಿಭೂತಿಯ ಪಟ್ಟದೀಕ್ಷೆ’ ಪಂಚ ಕಳಶಂಗಳಲ್ಲಿ ತೀಥೋದಕಂಗಳ ತುಂಬಿ ಶಿವಕಲಾ ಸ್ಥಾಪನಂ ಮಾಡಿ ಆ ಕಳಶೋದಕಂಗಳಿಂ ಶಿಷ್ಯಗೆ ಸ್ನಾಪನಮಂ ಮಾಡುವುದು. ‘ಕಲಶಾಭಿಷೇಕಂ’ ಆಚಾರ್ಯನು ಮಾಡಿ ಶಿಷ್ಯಂಗೆ ಉಪದೇಶಿಸುವ ಲಿಂಗಮಂ ತಾನು ಅರ್ಚನೆಯಂ ಮಾಡಿ ಶಿಷ್ಯನಂ ನೋಡಿ ಶಿಷ್ಯನಂ ನೋಡಿಸುವುದು ‘ಲಿಂಗಾಯತದೀಕ್ಷೆ’ ಎನಿಸಿಕೊಂಬುದು. ಆ ಶ್ರೀ ಗುರುನಾಥನಿಂದುಪದಿಷ್ಟವಾದ ಪ್ರಾಣಲಿಂಗವನು ಶಿಷ್ಯನು ಭಕ್ತಿಯಿಂ ಸ್ವೀಕರಿಸಿ ತನ್ನ ಉತ್ತಮಾಂಗ ಸ್ಥಾನಗಳಲ್ಲಿ ಧರಿಸುವುದೆ ‘ಲಿಂಗಸ್ವಾಯತ ದೀಕ್ಷೆ’ ಎನಿಸಿಕೊಂಬುದಯ್ಯ ಶಾಂತವೀರೇಶ್ವರಾ