Index   ವಚನ - 699    Search  
 
ಗಜಚರ್ಮವೆ ಕಂಥೆ, ಧರಣೆಯೆ ಖಟ್ಯಾಂಗ, ಅಂಬುಧಿಯೆ ಕಮಂಡಲ, ಸುರಗಿರಿಯೆ ದಂಡ, ಸತ್ವ ರಜಸ್ತಮವೆ ಕಪ್ಪರ, ಧರ್ಮಾರ್ಥ ಕಾಮ ಮೋಕ್ಷ ರತಿಯೆ ಜೋಳಿಗೆ, ಪುಣ್ಯ ಪಾಪಂಗಳೆ ಮುರಿಗಳು, ಅಜಾಂಡಂಗಳೆ ಜಂಗು, ತಂತ್ರ ನಿಕರವೆ ಬಹಿರ್ವಾಸ, ಇತಿಹಾಸವೆ ಕೌಪ, ಉರಗ ರಾಜನೆ ಕಟಿಸೂತ್ರ, ಪುರಾಣ ಸ್ತೋಮವೆ ಅಂಗದಟ್ಟು, ಸ್ಮೃತಿಯೆ ಧೋತ್ರ, ಅಷ್ಟಾವರಣವೆ ರುದ್ರಬಂಧ, ಪಂಚ ಕೃತ್ಯವೆ ಬಗಲ ಜೋಳಿಗೆ, ಯಮ ಗಮನಂಗಳೆ ಕರ್ಣಕುಂಡಲ, ವನಸ್ಪತಿಯೆ ಶೃರೀರದ ರೋಮಂಗಳು, ಷಡಧ್ವವೆ ಚರಣದ ಹೆಜ್ಜೆಗಳು, ಮೇಘವೆ ಜಡೆ, ಶಾಂತಿಯೆ ಭಸ್ಮ, ಹಸ್ತದಲಿ ಶೂನ್ಯಲಿಂಗವನು ಧರಿಸಿ ಪ್ರಭುವೆ ಅನಾದಿ ಜಂಗಮವಾಗಿ ಅನಾದಿ ಭಕ್ತನಾದ ಬಸವೇಶ್ವರನ ಮಂದಿರದಲ್ಲಿ ಭಕ್ತಿಭಿಕ್ಷವ ಬೇಡಿಹನಯ್ಯ ಶಾಂತವೀರೇಶ್ವರಾ