ಮತ್ತಂ, ಶಿವನು ಸರ್ವಾನುಗ್ರಹಕರ್ತೃವಹತನದಿಂದ
ಬಾಲರು ಬಾಲಿಶರು ಭೋಗೀಶರುಗಳಿಗೆ
ಅನುಗ್ರಹಮಾಡಲ್ತಕ್ಕುದೆಂಬಲ್ಲಿ ಆಯಾ ಅನುಗ್ರಹವು
ಅವರವರ ಸಂಸ್ಕಾರ ಪೂರ್ವಕವಾಗಿದ್ದಂಥಾದು.
ಮತ್ತಮಾ ಸಂಸ್ಕಾರದಿಂದವೆ ಮುಕ್ತಿಯಪ್ಪುದೆಂದೊಡೆ
ಕ್ರಿಯಾಜ್ಞಾನವ್ರತ ಮೊದಲಾದ ಉಪಾಯಂಗಳಿಗೆ
ಕಾರಣವಿಲ್ಲದೆ ಹೋಗುವುದು.
ಇಂತೆಂಬ ಚೋದ್ಯಮಂ ಪರಿಹರಿಸುತ್ತಿದ್ದನು.
ಆರು ಕೆಲಂಬರು ಹೇಗೆ ಇದ್ದಾರು
ಅವರಿಗೆ ಹಾಗೆ ಶಿವನು ಅನುಗ್ರಹ ಮಾಡುವನು;
ಅದು ಹೇಗೆಂದೊಡೆ:
ಕೆಲಂಬರು ಕ್ರಿಯಾಯೋಗ್ಯರು,
ಅವರಿಗೆ ಕ್ರಿಯೆಯಿಂದವೆ ಮುಕ್ತಿಯಪ್ಪದು. ಕೆಲಂಬರು ಜ್ಞಾನಯೋಗ್ಯರು.
ಕೆಲಂಬರು ಚರ್ಯಾಯೋಗ್ಯರು. ಕೆಲಂಬರು ಯೋಗಾರ್ಹರು.
ಈ ಪ್ರಕಾರದಲ್ಲಿ ಆರಿಗೆ ಅವುದರಿಂ ಮೋಕ್ಷವು ಪೇಳಲ್ಪಟ್ಟಿತ್ತು.
ಅದು ಶಿವನ ಕೃಪೆಯತ್ತಣಿಂದಪ್ಪುದು.
ಅದು ಕಾರಣ,
ಜ್ಞಾನದ್ಯುಪಾಯಂಗಳಿಗೆ ದೀಕ್ಷೆ ಕಾರಣವೆಂದು ಇಚ್ಛೈಸಲ್ಪಡುತ್ತಿದ್ದಿತು.
ಅಂತದರಿಂ ದೀಕ್ಷೆಯಿಂದವೆ ಮೋಕ್ಷಮಪ್ಪುದು,
ಉಪಾಯವೆ ನಿಯಾಮಕಪ್ಪುದು
ಮತ್ತಂ, ಶಿವನು ಸರ್ವಾನುಗ್ರಹಕ್ಕೆ ಕರ್ತೃವಾದ ಕಾರಣ,
ಆ ಉಪಾಂಗಳು ಶಿವನಿಂದವೆ ಕರ್ತೃವಾದ ಕಾರಣ.
ಆ ಉಪಾಯಂಗಳು ಶಿವನಿಂದವೆ ಉದಿರವಾಗಿದ್ದಂಥಾವು.
ಇಂತೆಂದು ಕಾರಣಾಗಮ ಪೇಳೂದಯ್ಯ,
ಶಾಂತವೀರೇಶ್ವರಾ.