Index   ವಚನ - 82    Search  
 
ಬಳಿಕಿಂತು ಹೃತ್ಕಮಲಕರ್ಣಿಕಾಮಧ್ಯದಲ್ಲಿ ಗುರುವಿತ್ತಿಷ್ಟಲಿಂಗದಲ್ಲಿ ಸಿಂಹಾಸನದಲ್ಲಿ ಮಾಡುವಾತ್ಮರ್ಥವಾದ ಪೂಜೆಗಳಂ ಗ್ರಾಮ ನದಿತೀರಾದಿ ಕ್ಷೇತ್ರಂಗಳಲ್ಲಿ ದೇವದಾನವಾದಿಗಳಿಂ ಪ್ರತಿಷ್ಠಿತಮಾದ ಲಿಂಗಂಗಳಲ್ಲಿ ಮಾಳ್ಪ ಪದಾರ್ಥಪೂಜೆಗಳಂ ಬಿಡದಾರಾಧಿಸುತ್ತಮಾತ್ಮಾರ್ಥ ಪೂಜೆಯೋಳೀಶ್ವರಾವರಣಮಾದ ವೃಷಭ ಭಾಸ್ಕರ ವೀರಭದ್ರ ಮಾತೃಕೆ ಸ್ಕಂದ ಕ್ಷೇತ್ರಪಾಲ ಬ್ರಹ್ಮ ವಿಷ್ಣು ರುದ್ರೆರೆಂಬ ದೇವತೆಗಳನವರವರ ಸ್ಥಾನಕ್ರಮವರಿದಾರಾಧಿಸುತ್ತೆ ಬೇರೆ ಸ್ಥಾಪಿತಂಗಳಾದ ವಿಷ್ವ್ಣಾದಿ ದೇವತಾಭಜನೆಗಳಂ ತ್ಯಜಿಸಿ, ತನ್ನಿಷ್ಟಲಿಂಗವು ಚೋರಾದಿಗಳಿಂದ ಪೋಗಿ ಬಾರದಿರ್ದೊಡೊಂದು ಲಕ್ಷ ಅಘೋರಮಂತ್ರ ಜಪದಿ ಶುದ್ಧಾತ್ಮನಾಗಿ, ಮೇಲಾಚಾರ್ಯನಿಂ ವಿದ್ಯುಕ್ತಮಾಗಿ ಮತ್ತೆ ಪಡೆದು ವ್ರತ ನಿಯಮಾದಿ ಲೋಪಮಾಗಲಷ್ಟೋತ್ತರಶತಗಾಯಿತ್ರಿ ಜಪದಿಂ ಪರಿಶುದ್ಧಿವೆಡೆದು, ಬಳಿಕ ಪರಮಪವಿತ್ರಮಾದ ಶಿವಪಾದೋದಕ ಸ್ವೀಕಾರ ಶಿವಪ್ರಸಾದಾನ್ನ ಸೇವನೆ ಶಿವಪ್ರಸಾದಾಂಬುಪಾನ ಶಿವನಿರ್ಮಾಲ್ಯದಳ ಕುಸುಮಧಾರಣಂಗಳು ಸದ್ಬ್ರಾಹ್ಮಣ ಮೊದಲಾದ ಶ್ರೀವಿಶಿಷ್ಟರ್ಗೆ ಕರ್ತವ್ಯವಹುದು. ಮಿಕ್ಕ ಪಾಪಾತ್ಮರ್ಗೆ ಪಾಷಾಂಡಿಗಳಿಗೆ ಶಾಪದಗ್ಧರಿಗೆ ಶಿವಸಂಸ್ಕಾರಹೀನರ್ಗೆ ನಾಸ್ತಿಕರ್ಗೆ ವೇದಬಾಹ್ಯರಿಗೆ ಯೋಗ್ಯವಲ್ಲೆಂದು ಪರಿಭಾವಿಸುತ್ತಿಂತು ಸಕಲಸತ್ಕಿಯೆಗಳಿಂ ನಿರ್ಮಲಾಂತಃಕರಣನಾಗಿರ್ಪಾತನೆ ಶುದ್ಧಶೈವನಪ್ಪನಯ್ಯಾ ಶಾಂತವೀರೇಶ್ವರಾ.