ಶಿವನು ಸರ್ವಮಂ ಸೃಜಿಸುತ್ತಿಹನು;
ತನ್ನ ಜ್ಞಾನಶಕ್ತಿಯಿಂದ ಸರ್ವಮಂ ಗ್ರಹಿಸುತ್ತಿಹನು.
ಮರಳಿಯಾ ಸರ್ವಮಂ ಸಂಹರಿಸುತ್ತಿಹನು.
ಈ ಪ್ರಣವಾಂಗ ವರ್ಣತ್ರಯದೊಳು
ಮಧ್ಯವರ್ಣಸ್ಥವಾದ ರುದ್ರೆನ ಜಗತ್ಪ್ರಭು ನೋಡಾ.
ಶಿವತತ್ವ ರುದ್ರತತ್ವಕ್ಕೆ ಭೇದವಿಲ್ಲ.
ಅದೆಂತೆಂದೊಡೆ:
ಶಿವತತ್ವವೆಂದು ಸದಾಶಿವತತ್ವವೆ ಸಕಲ ನಿಃಕಲ ತಾನೆಯಾಗಿಪ್ಪುದು
ಮಾಹೇಶ್ವರ ತತ್ವವೆ ಸಕಲವೆಂದರಿವುದು ನೋಡಾ.
ಅದೆಂತೆಂದೊಡೆ:
ಶಿವತತ್ವ ನಿಷ್ಕಲ ತತ್ವವೊಂದೆ ಭೇದ.
ಸದಾಶಿವತತ್ವ ಪಂಚಸಾದಾಖ್ಯಮೂರ್ತಿಯೆಂದು
ಮಾಹೇಶ್ವರ ತತ್ವವು ಚಂದ್ರಧರಾದಿ ಪಂಚವಿಂಶತಿ
ಲೀಲಾಮೂರ್ತಿ[ಯೆಂದು] ಭೇದವಾಗಿಪ್ಪುದು ನೋಡಾ.
ಅದರಿಂದ ತತ್ವಂಗಳು ಮೂವತ್ತೊಂದು ತೆರನಾಗಿಪ್ಪುದು.
ಅಲ್ಲಿ ಸದಾಶಿವತತ್ವದೊಳಗಣ ಕರ್ಮಸಾದಾಖ್ಯದಿಂದುದಯವಾದ
ಮಾಹೇಶ್ವರ ತತ್ವ; ಆ ಮಹೇಶ್ವರನಾ ಲೀಲಾಮೂರ್ತಿಯಾದ
ರುದ್ರತತ್ವದ ಕೋಟ್ಯಾಂಶದತ್ತಣಿಂದ
ಬ್ರಹ್ಮ ವಿಷ್ಣುಗಳು ಹುಟ್ಟಿದ ಕಾರಣ
ರುದ್ರನೆ ಸರ್ವ ಜಗಜ್ಜನನ ಸ್ಥಿತಿ ಲಯಂಗಳಂ ಮಾಡುವಾತನು,
ಪ್ರಣವ ಸ್ವರೂಪನು ತಾನೆ ನೋಡಾ.
ಬ್ರಹ್ಮ ವಿಷ್ಣುಗಳು ಪ್ರಣವಸ್ವರೂಪರಾದ ಕಾರಣ
ಜಗ[ದ] ಸೃಷ್ಟಿ ಸ್ಥಿತಿಗಳು
ಬ್ರಹ್ಮ ವಿಷ್ಣುಗಳಿಂದಾದುವೆಂಬುದು ಉಪಚಾರ.
ಅದೆಂತೆಂದೊಡೆ:
ಓಂಕಾರದಿಂದವೆ ಚತುಃವೇದಂಗಳು ಪುಟ್ಟಿದವು.
ಆ ಓಂಕಾರದಿಂದವೆ ಉದಾತ್ತಾದಿ ವೇದಸ್ವರಂಗಳು
ಷಡಾದಿ ಸಪ್ತ ಸ್ವರಂಗಳು ಪುಟ್ಟಿದವು.
ಓಂಕಾರದಿಂದವೆ ಬ್ರಹ್ಮ ಮೊದಲು ತೃಣ ಕಡೆಯಾದ
ಸಚರರಾತ್ಮಕವಾದ ಸರ್ವಪ್ರಪಂಚು ಪುಟ್ಟಿತ್ತು ನೋಡಾ.
ಅದೆಂತೆಂದೊಡೆ:
ಪ್ರಣವರೂಪಾದ ಉಮೆಯೆಂಬ ಅಕಾರ ಶಕ್ತಿಯಂದ
ಷೋಡಶ ಸ್ವರಾಕ್ಷರಂಗಳಾದವು
ಜೇಷ್ಠೆಯೆಂಬ ಉಕಾರಶಕ್ತಿಯಿಂದ ಅವಕ್ಕೆ
ಆದಿ ಮಧ್ಯಾವಸಾನವಾದ
ಸ್ಪರುಶನಾಕ್ಷರವಿಪ್ಪತ್ತೈದು ಪುಟ್ಟಿದವು.
ಕಾದಿಯೆಂಬ ಮಕಾರಶಕ್ತಿಯಿಂದ ಆದಿ ಕ್ಷಾಂತವಾದ
ದಶವ್ಯಾಪಕಾಕ್ಷರಂಗಳು ಪುಟ್ಟಿದವು.
ಇಂತು ಶಕ್ತಿವರ್ಣಂಗಳಿಂದ ಏಕ ಪಂಚ ಷಡ್ವರ್ಣಂಗಳು
ಪುಟ್ಟಿದವು ನೋಡಾ.
ಇಂತು ಶಕ್ತಿವರ್ಣಂಗಳಿಂದ ಏಕ ಪಂಚ ಕಳಾಬ್ರಹ್ಮಮೂರ್ತಿಗಳು
ಅಷ್ಟತ್ರಿಂಶತ್ಕಳಾ ಬೀಜಂಗಳಾಗಿಹವು ನೋಡಾ.
ಅದರಿಂದವೆ ಚಂದ್ರ ಸೂರ್ಯಗ್ನಿಗಳೆಂಬ ತ್ರಿದೇವತೆಗಳ
ಷೋಡಶ ದ್ವಾದಶ ಕಳೆಗಳೆಂಬ ಅಷ್ಟತ್ರಿಂಶತ್ಕಳೆಗಳು ಪುಟ್ಟಿದವು.
“ತ್ರಿಕೋಣಾಮುಮಯಾ ಸಾರ್ದಂ ಸೋಮ ಸೂರ್ಯಾಗ್ನಿ
ಲೋಚನಃ”
ಸೋಮ ಸೂರ್ಯಾಗ್ನಿಗಳೇ ನೇತ್ರಂಗಳಾಗಿಹ ತ್ರಿಲೋಚನನು
ತ್ರಿಕೋಣಸ್ಥವಾದ ಉಮಾಶಕ್ತಿಸಮೇತವಾಗಿಹನು ನೋಡಾ.
ಆ ಉಮಾವಲ್ಲಭನೆ ಪಂಚಬ್ರಹ್ಮವಾದ.
ಅದೆಂತೆಂದೊಡೆ:
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನನೆಂಬ
ಪಂಚಬ್ರಹ್ಮಮೂರ್ತಿಗಳಿಂದ ಪಂಚಭೌತಿಕಂಗಳು ಪುಟ್ಟಿದವು.
ಅದೆಂತೆಂದೊಡೆ:
ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತು.
ವಾಮದೇವಮುಖದಲ್ಲಿ ಅಪ್ಪು ಪುಟ್ಟಿತು.
ಅಘೋರಮುಖದಲ್ಲಿ ಅಗ್ನಿ ಪುಟ್ಟಿತು.
ತತ್ಪುರಷಮುಖದಲ್ಲಿ ವಾಯು ಪುಟ್ಟಿತು.
ಈಶಾನಮುಖದಲ್ಲಿ ಆಕಾಶ ಪುಟ್ಟಿತು.
ಇದು ಕಾರಣ,
ಭೌತಿಕ ಜಗವಲ್ಲ ಪಂಚಬ್ರಹ್ಮಮಯವೆಂದರಿವುದು ನೋಡಾ.
ಅದೆಂತೆಂದೊಡೆ:
ನಿವೃತ್ತಿಕಲೆಯೆ ಪೃಥ್ವಿಯೆಂದು,
ಪ್ರತಿಷ್ಠಾಕಲೆಯೆ ಅಪ್ಪುವೆಂದು
ವಿದ್ಯಾಕಲೆಯೆ ಅಗ್ನಿಯೆಂದು,
ಶಾಂತಿಕಲೆಯೆ ವಾಯುವೆಂದು
ಶಾಂತ್ಯತೀತಕಲೆಯೆ ಆಕಾಶವೆಂದು ಹೀಗೆ ಪಂಚತತ್ವಂಗಳು
ಪಂಚಕಲಾರೂಪಂಗಳೆಂದರಿವುದು ಕಾಣಾ
ಶೂನ್ಯನಾಥಯ್ಯ.
Art
Manuscript
Music
Courtesy:
Transliteration
Śivanu sarvamaṁ sr̥jisuttihanu;
tanna jñānaśaktiyinda sarvamaṁ grahisuttihanu.
Maraḷiyā sarvamaṁ sanharisuttihanu.
Ī praṇavāṅga varṇatrayadoḷu
madhyavarṇasthavāda rudrena jagatprabhu nōḍā.
Śivatatva rudratatvakke bhēdavilla.
Adentendoḍe:
Śivatatvavendu sadāśivatatvave sakala niḥkala tāneyāgippudu
māhēśvara tatvave sakalavendarivudu nōḍā.
Adentendoḍe:
Śivatatva niṣkala tatvavonde bhēda.
Sadāśivatatva pan̄casādākhyamūrtiyendu
Māhēśvara tatvavu candradharādi pan̄cavinśati
līlāmūrti[yendu] bhēdavāgippudu nōḍā.
Adarinda tatvaṅgaḷu mūvattondu teranāgippudu.
Alli sadāśivatatvadoḷagaṇa karmasādākhyadindudayavāda
māhēśvara tatva; ā mahēśvaranā līlāmūrtiyāda
rudratatvada kōṭyānśadattaṇinda
brahma viṣṇugaḷu huṭṭida kāraṇa
rudrane sarva jagajjanana sthiti layaṅgaḷaṁ māḍuvātanu,
praṇava svarūpanu tāne nōḍā.
Brahma viṣṇugaḷu praṇavasvarūparāda kāraṇa
jaga[da] sr̥ṣṭi sthitigaḷu
brahma viṣṇugaḷindāduvembudu upacāra.
Adentendoḍe:Ōṅkāradindave catuḥvēdaṅgaḷu puṭṭidavu.
Ā ōṅkāradindave udāttādi vēdasvaraṅgaḷu
ṣaḍādi sapta svaraṅgaḷu puṭṭidavu.
Ōṅkāradindave brahma modalu tr̥ṇa kaḍeyāda
sacararātmakavāda sarvaprapan̄cu puṭṭittu nōḍā.
Adentendoḍe:
Praṇavarūpāda umeyemba akāra śaktiyanda
ṣōḍaśa svarākṣaraṅgaḷādavu
jēṣṭheyemba ukāraśaktiyinda avakke
ādi madhyāvasānavāda
sparuśanākṣaravippattaidu puṭṭidavu.
Kādiyemba makāraśaktiyinda ādi kṣāntavāda
daśavyāpakākṣaraṅgaḷu puṭṭidavu.
Intu śaktivarṇaṅgaḷinda ēka pan̄ca ṣaḍvarṇaṅgaḷu
puṭṭidavu nōḍā.
Intu śaktivarṇaṅgaḷinda ēka pan̄ca kaḷābrahmamūrtigaḷu
aṣṭatrinśatkaḷā bījaṅgaḷāgihavu nōḍā.
Adarindave candra sūryagnigaḷemba tridēvategaḷa
ṣōḍaśa dvādaśa kaḷegaḷemba aṣṭatrinśatkaḷegaḷu puṭṭidavu.
“Trikōṇāmumayā sārdaṁ sōma sūryāgni
lōcanaḥ”
Sōma sūryāgnigaḷē nētraṅgaḷāgiha trilōcananu
trikōṇasthavāda umāśaktisamētavāgihanu nōḍā.
Ā umāvallabhane pan̄cabrahmavāda.
Adentendoḍe:
Sadyōjāta vāmadēva aghōra tatpuruṣa īśānanemba
pan̄cabrahmamūrtigaḷinda pan̄cabhautikaṅgaḷu puṭṭidavu.
Adentendoḍe:
Sadyōjātamukhadalli pr̥thvi puṭṭitu.
Vāmadēvamukhadalli appu puṭṭitu.
Aghōramukhadalli agni puṭṭitu.
Tatpuraṣamukhadalli vāyu puṭṭitu.
Īśānamukhadalli ākāśa puṭṭitu.
Idu kāraṇa,
Bhautika jagavalla pan̄cabrahmamayavendarivudu nōḍā.
Adentendoḍe:
Nivr̥ttikaleye pr̥thviyendu,
pratiṣṭhākaleye appuvendu
vidyākaleye agniyendu,
śāntikaleye vāyuvendu
śāntyatītakaleye ākāśavendu hīge pan̄catatvaṅgaḷu
pan̄cakalārūpaṅgaḷendarivudu kāṇā
śūn'yanāthayya.