ಆ ತತ್ವದ ದೆಸೆಯಿಂದ ನಿಃಕಲ ಬ್ರಹ್ಮದ ಪರಶಕ್ತಿಯೊಡನೆ ಕೂಡಿ
ಜನಾಭಿಮುಖಿಯಾಗಿ, ಶಾಂತಿ ವಿದ್ಯೆ ಪ್ರತಿಷ್ಠೆ ನಿವೃತ್ತಿಗಳೆಂಬ
ಚತುಃಕಲಾಬೀಜಂಗಳಪ್ಪ
ಅಕಾರ ಉಕಾರ ಮಕಾರ ಒಕಾರಂಗಳಂ ಲಿಖಿಸೂದೊಂದು
ಶಬ್ದಬ್ರಹ್ಮದ ಕಲೆಯುಂಟು;
ಆ ಕಲಾಧೀಶ್ವರನು ಸರ್ವಮಂತ್ರಾಧೀಶ್ವರನಪ್ಪ
ಮಂಗಳ ರೂಪಾದ ಸದಾಶಿವನೆಂದರಿವುದು ನೋಡಾ.
ಪ್ರಥಮಬೀಜಮಪ್ಪ ಮಂತ್ರಬೀಜವು ಅಕ್ಷರರೂಪಾಗಿ
ಹಕಾರ ಮಕಾರಂಗಳಾಯಿತ್ತೆಂದರಿವುದು.
ಪ್ರಸಾದ ಮಂತ್ರವು ನಿತ್ಯವಾದ ತನ್ನ ಉತ್ಕೃಷ್ಟಸ್ಥಾನವನು
ತಾನು ಸರ್ವಗತನಾಗಿರ್ದು ಬಿಡುತ್ತಿರದು ನೋಡಾ.
ಅದು ಸರ್ವಾಂತರ್ಯಾಮಿಯಾಗಿರ್ದು ತಾಯ ಹಾಂಗೆ
ಸರ್ವಜಗತ್ತುಂ ರಕ್ಷಿಸುತ್ತಿಹುದಯ್ಯ.
ಆ ಪ್ರಣವದ ಊರ್ಧ್ವಪ್ರಭೇದದಲ್ಲಿಯ ಎಡದ ಭಾಗದಲ್ಲಿಯು
ಬಲದ ಭಾಗದಲ್ಲಿಯೂ ತನ್ನ ಶಕ್ತಿಬೀಜಂಗಳಾಗಿ
ಮೂರು ಪ್ರಕಾರವಾಗಿಹುದು ನೋಡಾ.
ಉಭಯ ಪಾರ್ಶ್ವದಲ್ಲಿ ಶಕ್ತಿಬೀಜಂಗಳೊಡನೆ ಕೂಡಿದ
ರೌದ್ರರೇಖೆ ಇರುತ್ತಿಹುದು
ಅಲ್ಲಿ ಪರಮಸೂಕ್ಷ್ಮನಾದಂಥ,
ಲೋಕಂಗಳಿಗೆ ಸುಖದುಃಖಮಂ ಮಾಡುವ
ಶಿವನು ಗೂಢ ಸಂಜ್ಞೆಯುಳ್ಳಾತನಾಗಿರುತ್ತಿಹನು ನೋಡಾ
ಮಧ್ಯರೇಖೆಯಾದ ಬಿಂದುರೇಖೆ ಮಕಾರವರ್ಣ
ಅಲ್ಲಿ ಶಕ್ತಿಸಮೇತ ರುದ್ರನಿರುತ್ತಿಹನು.
ಆ ದೇವನಿಂದ ಮಂತ್ರರೂಪಾದ ಸಕಲಾಗಮ ಚರಾಚರಾತ್ಮಕ
ಸರ್ವ ಜಗತ್ತು ಪ್ರವರ್ತಿಸುತ್ತಿಹುದು ನೋಡಾ
ಅದರಿಂದ ಪರಮ ಸೂಕ್ಷ್ಮನಾದ ಶಕ್ತಿಯೇ
ದೇಹವಾಗುಳ್ಳ ರುದ್ರನು ಅರಿದಡೆ
ಶಿವತತ್ವವನರಿದ ಪರುಷನು ಮರಳಿ ಜನ್ಮಕ್ಕೆ ಬಾರನು ನೋಡಾ.
ಆ ಶಿವಬೀಜದ ಬಲದ ಭಾಗದಲ್ಲಿ ಅಕಾರವೆಂಬ ಬೀಜಾಕ್ಷರವುಂಟು.
ಅಲ್ಲಿ ಪರಶಿವನ ಜ್ಞಾನಶಕ್ತಿಯೆನಿಸಿಕೊಂಬುದು,
ಆ ಬೀಜವೆ ಬ್ರಹ್ಮಬೀಜವು.
ಅಲ್ಲಿ ಜಗಸೃಷ್ಟ್ಯಾಧಿಕಾರಿಯಾದ ಬ್ರಹ್ಮನಿರುತ್ತಿಹನು ನೋಡಾ.
ಆ ಶಿವನು ವಾಮಭಾಗದಲ್ಲಿ ಉಕಾರವೆಂಬ ಬೀಜಾಕ್ಷರವುಂಟು,
ಅದು ಕ್ರಿಯಾಶಕ್ತಿಯೆನಿಸಿತ್ತಯ್ಯ;
ಆ ಉಕಾರದಲ್ಲಿ ನಿರಂಜನವಾದ ವಿಷ್ಣು ತಾನೆ
ಗೂಢಸಂಜ್ಞೆಯುಳ್ಳಾತನಾಗಿಹನು ನೋಡಾ.
ಆತನು ಪರಶಿವನಿಂದ ಹುಟ್ಟಿದನಾಗಿ ವಿಸರ್ಗಸ್ಥನಾಗಿಹನು.
ಆತನಿಂದ ಚರಾಚರಾತ್ಮಕವಾದ ಸರ್ವ ಜಗತ್ತು ಹುಟ್ಟಿದುದಯ್ಯ.
ಆ ದೇಹವನು ಗೂಢತ್ವದಿಂದಪ್ಪ ಕಾರಣ
ಮನುಷ್ಯರು ಕಾಣುತ್ತಿರರು.
[ಆ] ವಿಸರ್ಗದ ದೆಸೆಯಿಂದ ಜಗತ್ತು ಹುಟ್ಟುತ್ತಿಹುದು ನೋಡಾ.
ಅದರಿಂದ ಸರ್ವಜಗತ್ತಿಗೆ ವಿಸರ್ಗಶಬ್ದ ಹೇಳೂದು.
ಈ ವಿಶ್ವಕ್ಕೆ ಕರ್ತೃವಾದ ಪರಶಿವನೆ
ಜಗತ್ಪ್ರಭುವೆನಿಸಿಕೊಂಬ ನೋಡಾ.
ಆ ಶಿವನಿಂದ ಸಕಲ ಶತಸಹಸ್ರಂಗಳಾದ
ಶಕ್ತಿರಶ್ಮಿ ಸಮೂಹಗಳಿಂದ
ಸರ್ವ ಜಗತ್ತು ಪೂರಿಸಲ್ಪಟ್ಟುದಯ್ಯ.
ಆ ಶಿವಶಕ್ತಿಯಿಂದ ಜಗತ್ತು ತುಂಬಲ್ಪಟ್ಟ ಕಾರಣ,
ಸರ್ವ ಜಗತ್ತು ಶಿವಶಕ್ತಿಮಯವೆಂದರಿದೆನು ಕಾಣಾ
ಶೂನ್ಯನಾಥಯ್ಯ.