Index   ವಚನ - 5    Search  
 
ಮಲಮಾಯಾದಿಗಳು ಅವಯವಂಗಳು ಸಕಲ ಕರಣಂಗಳಿಲ್ಲದ ಎಲ್ಲಾ ತತ್ವಂಗಳನು ಮೀರಿದ ಅಜ್ಞಾನವೆ ಹೊದ್ದದ ಪರಶಿವನು ಅವಿದ್ಯೋಪಾಧಿಕತ್ವದಿಂದ ಬ್ರಹ್ಮಾದಿ ತೃಣಾಂತವಾದ ಪ್ರಾಣಿಜಾಲವಾಗಿ ಪುಣ್ಯಪಾಪ ಫಲಂಗಳಿಲ್ಲ. ಆ ಪರಬ್ರಹ್ಮ ಹೇಂಗೆ ಪರಿವೃತ್ತವಾಯಿತ್ತೆಂದಡೆ: ಬ್ರಹ್ಮ ಹರಿಯು ಸರ್ವದೇವತೆಗಳು ಮನುಷ್ಯರು ಪಶುಗಳು ಮೃಗಂಗಳು ಮೊದಲಾದ ಸರ್ವಪ್ರಾಣಿಗಳು ಶಿವನೆಂಬ ಸಮುದ್ರದಲ್ಲಿಯ ತುಂತುರ್ವನಿಗಳೆಂದರಿವುದು ನೋಡಾ. ಆ ಪರಬ್ರಹ್ಮವು ಎಲ್ಲಿಹನೆಂದಡೆ: ವೇದಾಂತ ಶಾಸ್ತ್ರಂಗಳ ಬಲ್ಲ ನಿರ್ಮಲಮತಿಗಳ ಹೃತ್ಕಮಲ ಮಧ್ಯದಲ್ಲಿ ಇಹಾತನೆಂದರಿಯಲು ಯೋಗ್ಯ ನೋಡಾ. ಇದು ಕಾರಣ, ಶರಧಿಯಲ್ಲಿ ಪುಟ್ಟಿದ ನೊರೆ ತೆರ ಬುದ್ಬುದ ಸೀಕರಾದಿಗಳು ಶರಧಿಯಾಗಲರಿಯವು. ರವಿಯಲ್ಲಿ ಪುಟ್ಟಿದ ರುಚ್ಯಾತಾಪಾದಿಗಳು ರವಿಯಂಶವಾಗಿದ್ದು ರವಿಯಲ್ಲ. ಚಂದ್ರನಲ್ಲಿ ತೋರುವ ಜೋತ್ಸ್ನೆ ಹಿಮಂಗಳು ಚಂದ್ರ ತಾನೆಯಲ್ಲ. ಅಗ್ನಿ ಸ್ಫುರಿಸಿದ ಉಷ್ಣರ್ಚಿಧೂಮ್ನಾದಿಗಳು ಪುಟ್ಟಿ ಅಗ್ನಿಯಲ್ಲ. ಅವರು ಹಾಂಗೆ ಪರತತ್ವದ ನಾನಾ ವೈಚಿತ್ರ್ಯದಿಂದ ಬ್ರಹ್ಮಾದಿ ತೃಣಾಂತವಾದ ಜೀವಜಾಲ ಪುಟ್ಟಿಯು ಅವು ಪರತತ್ವವು? ಅಲ್ಲ. ಇಂತಪ್ಪ ಜೀವತತ್ವವೆಂದು ಭಾವಿಸೂದು ಭ್ರಾಂತಿಜ್ಞಾನ ನೋಡಾ. ಜಲಕುಂಭಸಹಸ್ರಂಗಳಲ್ಲಿ ತೋರುವ ಚಂದ್ರಬಿಂಬವು ಪ್ರತ್ಯಕ್ಷ ಕುಂಭಸಹಸ್ರಂಗಳಲ್ಲಿ ತೋರತ್ತಿರ್ದೊಡಂ, ಚಂದಿರಬಿಂಬ ಸಹಸ್ರಂಗಳಾಗಿ ಭ್ರಾಂತರ ದೃಷ್ಠಿಗೆ ತೋರುತ್ತಿಹುದಲ್ಲದೆ, ನಿಭ್ರಾಂತರ ದೃಷ್ಠಿಗೆ ಚಂದಿರಬಿಂಬ ಒಂದೆ ನೋಡಾ. ಅದೆಂತೆಂದೊಡೆ: ಶರಧಿಯಲ್ಲಿ ಮರುಸ್ಪಂದದಿಂ ತರಂಗಾದಿ ನಾನಾಕಾರಂ ತೋರಿದ ಹಾಂಗೆ, ತನ್ನ ವಿಚಿತ್ರ ಶಕ್ತಿಗಳೆಂಬ ವಾಯುಸ್ಪಂದನದಿಂದ ತನ್ನಲ್ಲಿ ಜಗತ್ತು ಸ್ಪುರಿಸಿತ್ತು ನೋಡಾ. ಅಲ್ಲಿ ಶಿವಾಂಶವಾದ ಹಮ್ಮು ಪುಟ್ಟಿತ್ತು. ಅದರಿಂ ಧಾತುಗಳಿಂ ಬದ್ಧವಾಗಿ ತ್ರಿಗುಣಾತ್ಮಕವಾಗಿ ಪಂಚಮಹಾಭೂತಾತ್ಮಕವಾದ ಪಿಂಡವಾಯಿತ್ತು. ಅದು ಕಾರಣ, ನಾನು ಜೀವನೆಂದು ಬಗೆದಿಹ ವ್ಯಾಕುಲದಿಂ ನಿರ್ಮಲವಾದ ಪರಮಾತ್ಮನಲ್ಲಿ ಸುಖದಃಖಂಗಳೊಡನೆ ಆವಾಗಳು ಕೂಡಿಹ ಜೀವತ್ವ ಹೇಳಲ್ಪಟ್ಟುದು ಕಾಣಾ ಶೂನ್ಯನಾಥಯ್ಯ.