Index   ವಚನ - 4    Search  
 
ಶಿವನು ಸರ್ವಮಂ ಸೃಜಿಸುತ್ತಿಹನು; ತನ್ನ ಜ್ಞಾನಶಕ್ತಿಯಿಂದ ಸರ್ವಮಂ ಗ್ರಹಿಸುತ್ತಿಹನು. ಮರಳಿಯಾ ಸರ್ವಮಂ ಸಂಹರಿಸುತ್ತಿಹನು. ಈ ಪ್ರಣವಾಂಗ ವರ್ಣತ್ರಯದೊಳು ಮಧ್ಯವರ್ಣಸ್ಥವಾದ ರುದ್ರೆನ ಜಗತ್ಪ್ರಭು ನೋಡಾ. ಶಿವತತ್ವ ರುದ್ರತತ್ವಕ್ಕೆ ಭೇದವಿಲ್ಲ. ಅದೆಂತೆಂದೊಡೆ: ಶಿವತತ್ವವೆಂದು ಸದಾಶಿವತತ್ವವೆ ಸಕಲ ನಿಃಕಲ ತಾನೆಯಾಗಿಪ್ಪುದು ಮಾಹೇಶ್ವರ ತತ್ವವೆ ಸಕಲವೆಂದರಿವುದು ನೋಡಾ. ಅದೆಂತೆಂದೊಡೆ: ಶಿವತತ್ವ ನಿಷ್ಕಲ ತತ್ವವೊಂದೆ ಭೇದ. ಸದಾಶಿವತತ್ವ ಪಂಚಸಾದಾಖ್ಯಮೂರ್ತಿಯೆಂದು ಮಾಹೇಶ್ವರ ತತ್ವವು ಚಂದ್ರಧರಾದಿ ಪಂಚವಿಂಶತಿ ಲೀಲಾಮೂರ್ತಿ[ಯೆಂದು] ಭೇದವಾಗಿಪ್ಪುದು ನೋಡಾ. ಅದರಿಂದ ತತ್ವಂಗಳು ಮೂವತ್ತೊಂದು ತೆರನಾಗಿಪ್ಪುದು. ಅಲ್ಲಿ ಸದಾಶಿವತತ್ವದೊಳಗಣ ಕರ್ಮಸಾದಾಖ್ಯದಿಂದುದಯವಾದ ಮಾಹೇಶ್ವರ ತತ್ವ; ಆ ಮಹೇಶ್ವರನಾ ಲೀಲಾಮೂರ್ತಿಯಾದ ರುದ್ರತತ್ವದ ಕೋಟ್ಯಾಂಶದತ್ತಣಿಂದ ಬ್ರಹ್ಮ ವಿಷ್ಣುಗಳು ಹುಟ್ಟಿದ ಕಾರಣ ರುದ್ರನೆ ಸರ್ವ ಜಗಜ್ಜನನ ಸ್ಥಿತಿ ಲಯಂಗಳಂ ಮಾಡುವಾತನು, ಪ್ರಣವ ಸ್ವರೂಪನು ತಾನೆ ನೋಡಾ. ಬ್ರಹ್ಮ ವಿಷ್ಣುಗಳು ಪ್ರಣವಸ್ವರೂಪರಾದ ಕಾರಣ ಜಗ[ದ] ಸೃಷ್ಟಿ ಸ್ಥಿತಿಗಳು ಬ್ರಹ್ಮ ವಿಷ್ಣುಗಳಿಂದಾದುವೆಂಬುದು ಉಪಚಾರ. ಅದೆಂತೆಂದೊಡೆ: ಓಂಕಾರದಿಂದವೆ ಚತುಃವೇದಂಗಳು ಪುಟ್ಟಿದವು. ಆ ಓಂಕಾರದಿಂದವೆ ಉದಾತ್ತಾದಿ ವೇದಸ್ವರಂಗಳು ಷಡಾದಿ ಸಪ್ತ ಸ್ವರಂಗಳು ಪುಟ್ಟಿದವು. ಓಂಕಾರದಿಂದವೆ ಬ್ರಹ್ಮ ಮೊದಲು ತೃಣ ಕಡೆಯಾದ ಸಚರರಾತ್ಮಕವಾದ ಸರ್ವಪ್ರಪಂಚು ಪುಟ್ಟಿತ್ತು ನೋಡಾ. ಅದೆಂತೆಂದೊಡೆ: ಪ್ರಣವರೂಪಾದ ಉಮೆಯೆಂಬ ಅಕಾರ ಶಕ್ತಿಯಂದ ಷೋಡಶ ಸ್ವರಾಕ್ಷರಂಗಳಾದವು ಜೇಷ್ಠೆಯೆಂಬ ಉಕಾರಶಕ್ತಿಯಿಂದ ಅವಕ್ಕೆ ಆದಿ ಮಧ್ಯಾವಸಾನವಾದ ಸ್ಪರುಶನಾಕ್ಷರವಿಪ್ಪತ್ತೈದು ಪುಟ್ಟಿದವು. ಕಾದಿಯೆಂಬ ಮಕಾರಶಕ್ತಿಯಿಂದ ಆದಿ ಕ್ಷಾಂತವಾದ ದಶವ್ಯಾಪಕಾಕ್ಷರಂಗಳು ಪುಟ್ಟಿದವು. ಇಂತು ಶಕ್ತಿವರ್ಣಂಗಳಿಂದ ಏಕ ಪಂಚ ಷಡ್ವರ್ಣಂಗಳು ಪುಟ್ಟಿದವು ನೋಡಾ. ಇಂತು ಶಕ್ತಿವರ್ಣಂಗಳಿಂದ ಏಕ ಪಂಚ ಕಳಾಬ್ರಹ್ಮಮೂರ್ತಿಗಳು ಅಷ್ಟತ್ರಿಂಶತ್ಕಳಾ ಬೀಜಂಗಳಾಗಿಹವು ನೋಡಾ. ಅದರಿಂದವೆ ಚಂದ್ರ ಸೂರ್ಯಗ್ನಿಗಳೆಂಬ ತ್ರಿದೇವತೆಗಳ ಷೋಡಶ ದ್ವಾದಶ ಕಳೆಗಳೆಂಬ ಅಷ್ಟತ್ರಿಂಶತ್ಕಳೆಗಳು ಪುಟ್ಟಿದವು. “ತ್ರಿಕೋಣಾಮುಮಯಾ ಸಾರ್ದಂ ಸೋಮ ಸೂರ್ಯಾಗ್ನಿ ಲೋಚನಃ” ಸೋಮ ಸೂರ್ಯಾಗ್ನಿಗಳೇ ನೇತ್ರಂಗಳಾಗಿಹ ತ್ರಿಲೋಚನನು ತ್ರಿಕೋಣಸ್ಥವಾದ ಉಮಾಶಕ್ತಿಸಮೇತವಾಗಿಹನು ನೋಡಾ. ಆ ಉಮಾವಲ್ಲಭನೆ ಪಂಚಬ್ರಹ್ಮವಾದ. ಅದೆಂತೆಂದೊಡೆ: ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನನೆಂಬ ಪಂಚಬ್ರಹ್ಮಮೂರ್ತಿಗಳಿಂದ ಪಂಚಭೌತಿಕಂಗಳು ಪುಟ್ಟಿದವು. ಅದೆಂತೆಂದೊಡೆ: ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತು. ವಾಮದೇವಮುಖದಲ್ಲಿ ಅಪ್ಪು ಪುಟ್ಟಿತು. ಅಘೋರಮುಖದಲ್ಲಿ ಅಗ್ನಿ ಪುಟ್ಟಿತು. ತತ್ಪುರಷಮುಖದಲ್ಲಿ ವಾಯು ಪುಟ್ಟಿತು. ಈಶಾನಮುಖದಲ್ಲಿ ಆಕಾಶ ಪುಟ್ಟಿತು. ಇದು ಕಾರಣ, ಭೌತಿಕ ಜಗವಲ್ಲ ಪಂಚಬ್ರಹ್ಮಮಯವೆಂದರಿವುದು ನೋಡಾ. ಅದೆಂತೆಂದೊಡೆ: ನಿವೃತ್ತಿಕಲೆಯೆ ಪೃಥ್ವಿಯೆಂದು, ಪ್ರತಿಷ್ಠಾಕಲೆಯೆ ಅಪ್ಪುವೆಂದು ವಿದ್ಯಾಕಲೆಯೆ ಅಗ್ನಿಯೆಂದು, ಶಾಂತಿಕಲೆಯೆ ವಾಯುವೆಂದು ಶಾಂತ್ಯತೀತಕಲೆಯೆ ಆಕಾಶವೆಂದು ಹೀಗೆ ಪಂಚತತ್ವಂಗಳು ಪಂಚಕಲಾರೂಪಂಗಳೆಂದರಿವುದು ಕಾಣಾ ಶೂನ್ಯನಾಥಯ್ಯ.