ಅಂಡಜನುದರದಲ್ಲಿ ತಂದಿಕ್ಕಿದಾ ತತ್ತಿ
ಮುಂದಣಾಧಿಕ್ಯವನರಿಯಲ್ಲುದೆ ನೋಡಾ.
ಪಿಂಡಾಧಿಕ್ಯದ ಸಂದಳಿಯದ ಮುನ್ನ ಮುಂದೆ ಬಂದಿಪ್ಪುದು ಅದು ನೋಡಾ.
ಒಬ್ಬ ಹೆಂಗೂಸಿಂಗೆ ಗಂಡು ನಾಲ್ವರು,
ಗರ್ಭಿಣಿಯಾಗದ ಮುನ್ನ ಪ್ರಸೂತೆ,
ಬಂಜೆಯ ಮಕ್ಕಳು ಮೂವರೈದಾರೆ,
ನಾಲ್ವರ ಮೂಲವರಿಯದ ಕಾರಣ ಧರೆಯ ಮೇಲೆನಿಸಿದವು?
ಉಪಮೆಗುಡದ ಬಣ್ಣ ನೋಡಿ ಸಿಲಿಕಿದ ಕೂಟ
ಉಂಟು ದಣಿಯದ ತೃಪ್ತಿ
ಶ್ರೋತ್ರೇಂದ್ರಿಯದಲ್ಲಿ ಸವಿದು ಹರಿಯದ ಪರಿಮಳ
ಸಂದು ಸವೆದೊಂದಾದ ಕೂಟ
ನೋಡುವ ನೋಟವರಿತು ವಾಸಿಸುವ ವಾಸನೆ ಅರಿತು .
ಆಚಾರ ಪ್ರಾಣವಾಗಿ ಅರಿವರಿತು
ಮರಹು ನಷ್ಟವಾದಾತನೈಕ್ಯನು.
ಆಚಾರವರಿತು ಅನಾಚಾರ ನಷ್ಟವಾದಾತನನುಪಮಮಹಿಮನು.
ಶುದ್ಧ ಸಿದ್ಧ ಪ್ರಸಿದ್ಧಕ್ಕಾತ ನೆಲಮನೆ,
ಆತನ ಮೀರುವದೊಂದೊಡ್ಡವಣೆಯ ಕಾಣೆ.
ಕರುಣಾಮೃತಪೂರ್ಣವಾದ ಕುಂಭಕ್ಕೆ ವಿರಳ ಉಂಟೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನನೊಡಗೂಡಿ
ಸಂದಳಿದ ಶರಣಂಗೆ ಬಳಕೆಯ ಬೇಟದ ಬಣ್ಣ ಉಂಟೆ?