Index   ವಚನ - 16    Search  
 
ಅನುಭಾವಲಿಂಗದ ಮರ್ಮವನರಿವುದರಿದು, ಲಿಂಗಸಂಜ್ಞೆಯನರಿವುದರಿದು, ಲಿಂಗವೆಂದಾದುದೆಂದರಿವುದರಿದು, ಲಿಂಗವಂತಹುದಿಂತಹುದೆಂದರಿವುದರಿದು ನೋಡಾ. ಲಿಂಗದಲ್ಲಿಯೆ ಅಗಮ್ಯವಯ್ಯ. ಭೂಮಿಯೆ ಪೀಠಕೆ, ಆಕಾಶವೆ ಲಿಂಗವೆಂದರಿದಾತನು ಲಿಂಗವನರಿದಾತನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗದ ಆದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ. ಇಂತೀ ತ್ರಿಮೂರ್ತಿಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂಬ ಭಾವರಹಿತ ಲಿಂಗವು `ಬ್ರಹ್ಮ ವಿಷ್ಣ್ವಾದಿದೇವಾನಾಮಪ್ಯಗೋಚರಂ' ಎಂದು ಇದಂ ಮಾಹೇಶ್ವರಂ ಜ್ಯೋತಿರಾಪಾತಾಲೇ ವ್ಯವಸ್ಥಿತಂ' ಅತೀತಂ ಸತ್ಯಲೋಕಾದೀನನಂತಂ ದಿವ್ಯಮೀಶ್ವರಂ ಲಲಾಟಲೋಚನಂ ಚಾಂದ್ರೀ ಕಲಾಪಂ ಚತುರ್ದಶಂ ಅಂತರ್ವತೇಹ ನಿರ್ದೇಹಂ ಗುರುರೂಪಂ ವ್ಯವಸ್ಥಿತಂ ಪಾದಭಿನ್ನಂ ಹಿ ಲೋಕೇನ ಮೌಳಿಬ್ರಹ್ಮಾಂಡಭಿತ್ತಯೇ ಭುಜಪ್ರಾಂತದಿಗಂತಾನಾಂ ಭೂತಾನಾಂ ಪತಯೇ ನಮಃ ನಾದಲಿಂಗಮಿತಿಜ್ಞೇಯಂ ಬಿಂದುಪೀಠಮುದಾಹೃತಂ ನಾದಬಿಂದುಯುತಂ ರೂಪಂ ಲಿಂಗಾಕಾರಮಿಹೋಚ್ಯತೇ ಎಂಬ ಲಿಂಗಮೆಂದು ಲಿಯತೇ ಗಮ್ಯತೇ ಯತ್ರ ಯೇನಸರ್ವಂ ಚರಾಚರಂ ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿಮೇವ ಚ ಲಯಾನಾಂ ಗಮನಶ್ಚೈವ ಲಿಂಗಾಕಾರಮಿಹೋಚ್ಯತೇ ಎಂದರಿದಾತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿದ ಶರಣಂಗೆ ಸುಲಭ, ಮಿಕ್ಕಿನವರಿಗಳಿಗಲಭ್ಯವಯ್ಯಾ.