ಅರ್ಪಿತದ ಮಹಿಮೆಯ ಅನುವ,
ಪ್ರಸಾದದ ಮಹಿಮೆಯ
ಆವಂಗಾವಂಗರಿಯಬಾರದು.
ವಿಷ್ಣ್ವಾದಿ ದೇವ ದಾನವ ಮಾನವ,
ಋಷಿಜನಂಗಳಿಗೆಯೂ ಅರಿಯಬಾರದು.
ಕಿಂಚಿತ್ತರಿದಡೆಯೂ ಅರ್ಪಿಸಬಾರದು.
ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು.
ಕಿಂಚಿತ್ ಪ್ರಸಾದವ ಹಡೆದಡೆಯೂ,
ಪ್ರಸಾದವ ಭೋಗಿಸಿ ಪರಿಣಾಮದಿಂ
ಮುಕ್ತರಾಗಿರಲರಿಯರು.
ಶಿವ ಶಿವಾ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು.
ಗುರು ಲಿಂಗ ಜಂಗಮವನೇಕೀಭವಿಸಿ
ಮಹಾಲಿಂಗವನು ನೇತ್ರದಲ್ಲಿ ಧರಿಸಿ,
ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು.
ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ
ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು.
ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ
ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು.
ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ
ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು.
[ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ
ತ್ವಕ್ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು]
ಆ ಮಹಾಲಿಂಗವನು ಭಾವದಲ್ಲಿ ಧರಿಸಿ
ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ
ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು.
ಆ ಮಹಾಲಿಂಗವನು ಮನದಲ್ಲಿ ಧರಿಸಿ
ಮನೋಮಯಲಿಂಗಕ್ಕೆ ಮನದ ಕೈಯಲೂ
ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು.
ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ
ವಾಕ್ಲಿಂಗಕ್ಕೆ ವಾಕ್ಕಿನ ಕೈಯಲ್ಲೂ
ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ
ರುಚಿ ಮೊದಲಾದ ಸುಖವನರ್ಪಿಸಲರಿಯರು.
ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ
ಏಕಾದಶ ಅರ್ಪಿತ ಸ್ಥಾನವನರಿದು
ಅರ್ಪಿತವಾದ ಏಕಾದಶ ಪ್ರಸಾದವನರಿಯರು.
ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು.
ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ
ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕ
ಎಂಬುದನರಿಯರು.
ಪೂಜಕಾ ಬಹವಸ್ಸಂತಿ ಭಕ್ತಾಶ್ಶತಸಹಸ್ರಶಃ
ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ
ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ
ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ
ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ.
ಅರ್ಪಿತ ಮುನ್ನವೇ ಅಸಾಧ್ಯ.
ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Arpitada mahimeya anuva,
prasādada mahimeya
āvaṅgāvaṅgariyabāradu.
Viṣṇvādi dēva dānava mānava,
r̥ṣijanaṅgaḷigeyū ariyabāradu.
Kin̄cittaridaḍeyū arpisabāradu.
Kin̄cit arpisidaḍeyū prasādava haḍeyabāradu.
Kin̄cit prasādava haḍedaḍeyū,
prasādava bhōgisi pariṇāmadiṁ
muktarāgiralariyaru.
Śiva śivā! Guru liṅga jaṅgamakke tanu mana dhanavanarpisalariyaru.
Guru liṅga jaṅgamavanēkībhavisi
mahāliṅgavanu nētradalli dharisi,
nētraliṅgakke nētrada kaiyalū rūpavanarpisalariyaru.
Ā mahāliṅgavanu śrōtradalli dharisi
śrōtraliṅgakke śrōtrada kaiyalū mahāśabdavanarpisalariyaru.
Ā mahāliṅgavanu ghrāṇadalli dharisi
ghrāṇaliṅgakke ghrāṇada kaiyalū sugandhavanarpisalariyaru.
Ā mahāliṅgavanu jihveyalli dharisi
jihveyaliṅgakke jihveya kaiyalū mahārasavanarpisalariyaru.
[Ā mahāliṅgavanu tvakkinalli dharisi
Tvakliṅgakke ghrāṇada kaiyalli mahāsparśavanarpisalariyaru]
ā mahāliṅgavanu bhāvadalli dharisi
bhāvaliṅgakke bhāvada kaiyalū sarvasukhapariṇāma
modalāda bhāvābhāva niṣkalavastuvanarpisalariyaru.
Ā mahāliṅgavanu manadalli dharisi
manōmayaliṅgakke manada kaiyalū
sakala niṣkalādi rūpavanarpisalariyaru.
Ā mahāliṅgavanu vākkinalli dharisi
vākliṅgakke vākkina kaiyallū
paḍipadārtha modalāda sakaladravyaṅgaḷa
ruci modalāda sukhavanarpisalariyaru.
Ā mahāliṅgavanu intu manōvākkāyavemba trividhadalli
Ēkādaśa arpita sthānavanaridu
arpitavāda ēkādaśa prasādavanariyaru.
Mahārpitavanu mahāprasādavanu entū ariyaru.
Paran̄jyōtiḥ paraṁ tattvaṁ parātparataraṁ tathā
paravastu prasādaḥ syādapramāṇaṁ prasādaka
embudanariyaru.
Pūjakā bahavas'santi bhaktāśśatasahasraśaḥ
mahāprasādapātraṁ tu dvitrā vā naiva pan̄caṣaḥ
prasādaṁ girijādēvi sid'dhakinnaraguhyakāḥ
viṣṇupramukhadēvāśca na jānanti śivaṅkaraṁ
emba prasāda ellarigeyū asādhya.
Arpita munnavē asādhya.
Arpitavū prasādavū cannabasavaṇṇaṅgāyittu
uriliṅgapeddipriya viśvēśvarā.