Index   ವಚನ - 46    Search  
 
ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಅಷ್ಟಮಹಾದ್ವೈಶ್ವರ್ಯವ ಹಿರಿದಾಗಿ ಕೊಟ್ಟಡೆ ಲಿಂಗ ಒಲಿದುದಕ್ಕೆ ಕುರುಹಲ್ಲ. ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ. ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ. ಲಿಂಗ ಒಲಿದ ಪರಿ: ಗುರುಲಿಂಗಜಂಗಮ ಒಂದೆಂದು ಅರಿದು ನಿಶ್ಚಯಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು ಲಿಂಗ ಒಲಿದುದು. ಕಾಯಭಾವವಳಿದು ಲಿಂಗವೆಂದು ಭಾವಿಸಿ ಭಾವಸಿದ್ಧಿಯಾದುದು,ಲಿಂಗ ಒಲಿದುದು. ಲಿಂಗವಲ್ಲದೆ ಇನ್ನಾವುದು ಘನ! ಎದರಿದುವೆ, ಲಿಂಗ ಒಲಿದುದು. ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು. ಸದಾಚಾರ ಲಿಂಗ ಒಲಿದುದು. ನಿರ್ವಂಚನೆ ಲಿಂಗ ಒಲಿದುದು. ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು ಸಮಭೋಗವಲ್ಲದೆ ಲಿಂಗವಂತಗೆ ವಿಶೇಷಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು. ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ ವರ್ತಿಸದಿದ್ದಡೆ ಲಿಂಗ ಒಲಿದುದು. ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶರಾ.