ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ
ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ
ನೀವು ಅರ್ಪಿಸಿದ ಪರಿಯೆಂತು?
ಪ್ರಸಾದವ ಕೊಂಡ ಪರಿಯೆಂತು ಹೇಳಿರೆ?
ರೂಪಾರ್ಪಿತವಾಯಿತ್ತು ನೇತ್ರದಿಂದ,
ಮೃದು, ಕಠಿಣ, ಶೀತೋಷ್ಣಂಗಳು
ಅರ್ಪಿತವಾದವು ಸ್ಪರ್ಶನದಿಂದ.
ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ
ರೂಪು ಸ್ಪರ್ಶನವೆಂಬೆರಡೆ
ವಿಷಯಂಗಳರ್ಪಿತವಾದವು.
ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ.
ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ,
ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ
ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ?
ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ?
ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ.
ಪಂಚೇಂದ್ರಿಯಂಗಳಿಂದವೂ,
ಶಿವಲಿಂಗಪಂಚೇಂದ್ರಿಯ ಮುಖಕ್ಕೆ
ಪಂಚವಿಷಯಂಗಳನೂ ಅರ್ಪಿಸಬೇಕು.
ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ.
ಅಲ್ಲದಿರ್ದಡೆ ಅಷ್ಟವಿಧಾರ್ಚನೆ
ಷೋಡಶೋಪಚಾರ ಕ್ರಿಯೆ ಅಲ್ಲ.
ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ.
ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ.
ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ
ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
Art
Manuscript
Music
Courtesy:
Transliteration
Āvāva dravyapadārthaṅgaḷanu śivaliṅgakkarpisi
prasādavādallade koḷḷevemba prasādigaḷirā
nīvu arpisida pariyentu?
Prasādava koṇḍa pariyentu hēḷire?
Rūpārpitavāyittu nētradinda,
mr̥du, kaṭhiṇa, śītōṣṇaṅgaḷu
arpitavādavu sparśanadinda.
Nētra hastaveraḍindriyaṅgaḷindavū
rūpu sparśanavemberaḍe
viṣayaṅgaḷarpitavādavu.
Nīvāgaḷē prasādavāyittendu bhōgisatoḍagidiri.Intu dravyaṅgaḷa rasavanū, gandhavanū, śabdavanū,
śrōtr̥, ghrāṇa, jihvegaḷinda mūru viṣayaṅgaḷanū
arpisada munna prasādavāda pari ento?
Arpitavendanarpitava komba pari ento?
Prasādigaḷāda pari ento śiva śivā.
Pan̄cēndriyaṅgaḷindavū,
śivaliṅgapan̄cēndriya mukhakke
pan̄caviṣayaṅgaḷanū arpisabēku.
Arpisi prasādava koṇḍaḍe prasādi.
Alladirdaḍe aṣṭavidhārcane
Ṣōḍaśōpacāra kriye alla.
Prasādiyalla, bhaktiya pariyū alla.
Pūjakarembene pūjeya oppavalla.
Sādhāraṇa pūjakarapparu kēḷiraṇṇā.
Uriliṅgapeddipriya viśvēśvarana
sāvadhānārpitadalli svayavāgarayya.