Index   ವಚನ - 53    Search  
 
ಇಂದ್ರಿಯ ವಿಷಯ ಕರಣಂಗಳರಿದಾಚಾರದಲಗಲ್ಲಿ ವರ್ತಿಸುವ ಪರಿಯೆಂತೆಂದಡೆ: ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ ಈ ಐದು ಜ್ಞಾನೇಂದ್ರಿಯಗಳು. ಶ್ರೋತ್ರದಲ್ಲಿ ಗುರುವಚನ ಶಿವಾಗಮ. ಪುರಾಣಾದ್ಯರ ವಚನವಲ್ಲದೆ ಕೇಳದಿಹ ತ್ವಕ್ಕಿನಲ್ಲಿ ವಿಭೂತಿ ರುದ್ರಾಕ್ಷೆ ಶಿವಲಿಂಗವಲ್ಲದೆ ತಾಳದಿಹ. ನೇತ್ರದಲ್ಲಿ ಶಿವಲಿಂಗವಲ್ಲದೆ ಅನ್ನವ ಕಾಣದಿಹ. ಜಿಹ್ವೆಯಲ್ಲಿ ಶಿವಮಂತ್ರವನಲ್ಲದೆ ಜಪಿಸದಿಹ. ನಾಸಿಕದಲ್ಲಿ ಶಿವಪ್ರಸಾದವಲ್ಲದೆ ವಾಸಿಸದಿಹ. ಶಬ್ದ ಸ್ಪರುಷ ರೂಪು ರಸ ಗಂಧ. ಶಬ್ದ ಗುರು,ಸ್ಪರುಷ ಲಿಂಗ, ರೂಪು ಶಿವಲಾಂಛನ, ರಸವೆ ಶಿವಪ್ರಸಾದ, ಗಂಧವೆ ಶಿವಾನುಭಾವ, ಕರ್ಮೇಂದ್ರಿಯಂಗಳು. ವಚನ ಗಮನ ಅವಧಾನ ವಿಸರ್ಜನ ಆನಂದ. ಇನ್ನು ಮನ ಬುದ್ಧಿ ಚಿತ್ತ ಅಹಂಕಾರ ಪಂಚ ಕ್ಲೇಶಂಗಳು. ಅನ್ನಮಯವೆ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ. ಅನ್ನಮಯವೆ ಪ್ರಸಾದ, ಪ್ರಾಣಮಯವೆ ಲಿಂಗ , ಮನೋಮಯವೆ ಧ್ಯಾನ, ವಿಜ್ಞಾನಮಯವೆ ಶಿವಜ್ಞಾನ, ಆನಂದಮಯವೆ ಚಿದಾನಂದವಾಗಿ ಇಂತೀ ಸರ್ವ ತತ್ವಂಗಳೆಲ್ಲ ಶಿವತತ್ವವಾಗಿಪ್ಪ ಕಾರಣ, ಶಿವಶರಣಂಗ ೆಶಿವಧ್ಯಾನವಲ್ಲದೆ ಮತ್ತೊಂದು ಅನ್ನವಿಲ್ಲಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.