ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ,
ಎನ್ನ ಪದವ ಈಗ ಅರಿದೆನು,
ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು.
ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು
ಮಿಕ್ಕುವೆಲ್ಲಾ ಮಿಥ್ಯವೆಂದರಿದು
ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ
ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ.
ಉಪಮಾತೀತ ವಾಙ್ಮನೋತೀತ ನೀನೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.