Index   ವಚನ - 66    Search  
 
ಎನ್ನ ಕರಸ್ಥಲದಲ್ಲಿಯ ಲಿಂಗಕ್ಕೆ ಬಂದ ಪದಾರ್ಥಂಗಳನರ್ಪಿಸುವೆನೆ? ಅರ್ಪಿಸಲಮ್ಮೆ. ಅದೇನು ಕಾರಣವೆಂದಡೆ: ಎನ್ನ ಕಂಗಳು ಕಂಡವಾಗಿ, ಎನ್ನ ಶ್ರೋತ್ರಗಳು ಕೇಳಿದವಾಗಿ, ಎನ್ನ ಕೈಗಳು ಮುಟ್ಟಿದವಾಗಿ, ಎನ್ನ ನಾಸಿಕ ವಾಸಿಸಿತ್ತಾಗಿ, ಎನ್ನ ಜಿಹ್ವೆ ರುಚಿಸಿತ್ತಾಗಿ. ಇಂತಪ್ಪ ಎನ್ನ ಅಂಜಿಕೆಯ ನಿಮ್ಮ ಶರಣರು ಬಿಡಿಸಿದರಾಗಿ. ಅದೆಂತೆಂದಡೆ: ಎನ್ನ ಶ್ರೋತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನೇತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ತ್ವಕ್ಕಿನಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ಜಿಹ್ವೆಯಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನಾಸಿಕದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಅಲ್ಲಲ್ಲಿ ಅರ್ಪಿತಂಗಳಾಗುತ್ತಿರ್ದವಾಗಿ, ಇನ್ನಂಜೆ ಅಂಜೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.