Index   ವಚನ - 68    Search  
 
ಎನ್ನ ನಾನರಿಯದೆ ಪುರಾಕೃತ ಕರ್ಮಫಲದಿಂ ಕರ್ಮವಶನಾಗಿ ಅಜ್ಞಾನಿಯಾಗಿ ಮಹಾದೀನನಾಗಿದ್ದಲ್ಲಿ ಪಾಪಪುಣ್ಯ ಸುಖದುಃಖಾದಿಕ್ರಿಯಾಕರ್ಮವೆಲ್ಲವು ಎನ್ನದು, ನಾನೇ ಸಂಸಾರಿ. ಎನ್ನ ಸಂಸಾರವ ಕೆಡಿಸಿ, ಘೃಣಾಮೂರ್ತಿ ಸದ್ಗುರು ಕೃಪೆಮಾಡಿ ಪೂರ್ವಜಾತವ ಕಳೆದು ಪುನರ್ಜಾತನ ಮಾಡಿ ಶಿವಜ್ಞಾನಸಂಪನ್ನನ ಮಾಡೆ ಬದುಕಿದೆನು. ಎನ್ನ ನಿಜವನರಿದೆನು ನಾನೇ ಗುರುಪುತ್ರನು. ಕಾಯವು ಪ್ರಸಾದಕಾಯ, ಭಕ್ತಾಕಾಯನಾಗಿ ಕಾಯಲಿಂಗ. ಪ್ರಾಣವು ಲಿಂಗಪ್ರಾಣವಾಗಿ ಪ್ರಾಣಲಿಂಗವು. ಎನ್ನ ಶ್ರೀಗುರುಲಿಂಗ ಎನ್ನ ಜಂಗಮಲಿಂಗವು ಪ್ರಸಾದ ಲಿಂಗವು ಮಂತ್ರಲಿಂಗವು ಶ್ರೀವಿಭೂತಿ ಲಿಂಗವು ಮಹಾಜ್ಞಾನ ತಾನೆ ಲಿಂಗವು. ಸಂಸಾರದಲ್ಲಿ ಕೆಡುವ ಪ್ರಾಣಿಗಳ ಕೆಡದಂತೆ ಮಾಡಿದನು. ಬೇಡಿತ್ತ ಕೊಡುವ ಲಿಂಗವನು ಬೇಡಿಕೊಳ್ಳಿರೆ. ಅನಾಥನಾಥನು ಅನಾಥಬಂಧುವು ವರದಮೂರ್ತಿಯು ದಾನಗುಣಶೀಲನು ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.