Index   ವಚನ - 69    Search  
 
ಎನ್ನ ಮನಕ್ಕೆ ಮತ್ತೊಂದ ನೆನೆಯಲು ತೆರಹಿಲ್ಲಯ್ಯಾ ಮಹಾದೇವನು ನೀನು, ಎನ್ನ ಮನವನವಗ್ರಹಿಸಿದೆ. ಆ ಮನವು ನಿನ್ನನೇ ಅವಗ್ರಹಿಸಿತ್ತಾಗಿ. ಎನ್ನ ವಾಕ್ಕಿಂಗೆ ಮತ್ತೊಂದ ನುಡಿಯಲು ತೆರಹಿಲ್ಲಯ್ಯಾ ಮಹಾಮಂತ್ರಮಯ ನೀನು, ಎನ್ನ ವಾಕ್ಕನವಗ್ರಹಿಸಿದೆ. ಎನ್ನ ಮಂತ್ರ ನಿನ್ನನೇ ಅವಗ್ರಹಿಸಿತ್ತಾಗಿ. ಎನ್ನ ಕಾಯಕ್ಕೆ ಮತ್ತೊಂದ ಭೋಗಿಸೆ ತೆರಹಿಲ್ಲಯ್ಯ. ಮಹಾಪ್ರಸಾದರೂಪನು ನೀನು, ಎನ್ನ ಕಾಯವನವಗ್ರಹಿಸಿದೆ, ಆ ಕಾಯವು ನಿನ್ನನೇ ಅವಗ್ರಹಿಸಿದುದಾಗಿ. ಇಂತು ಮನೋವಾಕ್ಕಾಯದ ಅಂತರಂಗಬಹಿರಂಗದ ಒಳಹೊರಗೂ ಸರ್ವಾಂಗಲಿಂಗವಾದ ಕಾರಣ ಮನೋವಾಕ್ಕಾಯದ ಸ್ಥಿತಿಗತಿ ನೀನೆ ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.