ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್‍ತ್ರಿಂಶತ್ ತತ್ತ್ವ
ಇಂತೀ ತತ್ತ್ವಂಗಳೆಲ್ಲವನೂ ಗರ್ಭೀಕರಿಸಿಕೊಂಡಿಪ್ಪ
ಈ ತತ್ತ್ವಂಗಳೆಲ್ಲವಕ್ಕೆಯೂ ಅಧಿಕವಾಗಿಪ್ಪ ಮಹಾತತ್ತ್ವವೂ
`ನ ಗುರೋರಧಿಕಂ ನ ಗುರೋರಧಿಕಂ' ಎಂದುದಾಗಿ
`ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ
'ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ' ಎಂದುದಾಗಿ
`ಗುರುದೇವೋ ಮಹಾದೇವೋ' ಎಂದುದಾಗಿ
ಶ್ರೀಗುರುತತ್ತ್ವವೇ ಪರತತ್ತ್ವವು.
ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ
ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು
ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು
ಅನಂತಕೋಟಿಗಳನೂ ಗರ್ಭೀಕರಿಸಿಕೊಂಡಿಪ್ಪ
ಇವಕೆ ಮಾತೃಸ್ಥಾನವಾಗಿ,
ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ
ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು.
ಈ ಮಹಾತತ್ವ್ತವು ಏಕವಾದ ಮಹಾಲಿಂಗವು.
ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು.
ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ.
ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು.
ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು,
ಆತನೇ ಆಗಮಜ್ಞನು, ಆತನೇ ಸರ್ವಜ್ಞನು.
ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ
ಇತರ ತತ್ತ್ವಂಗಳನೂ ಇತರ ದೇವತೆಗಳನೂ
ಇತರ ದೇವದಾನವಮಾನವರುಗಳನೂ
ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ?
ಶಿವ ಶಿವಾ ಸರಿ ಎಂದಡೆ ಮಹಾದೋಷವು.
ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು.
ಈ ಮಹಾದೇವನ ಭಕ್ತನೇ ಮಹಾದೇವನು.
ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ.
ಈ ಮಹಾಭಕ್ತನ ಪದವೇ ಪರಮಪದವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Ēkatattva tritattva pan̄catattva pan̄cavinśatitattva ṣaṭtrinśat tattva
intī tattvaṅgaḷellavanū garbhīkarisikoṇḍippa
ī tattvaṅgaḷellavakkeyū adhikavāgippa mahātattvavū
`na gurōradhikaṁ na gurōradhikaṁ' endudāgi
`nāsti tattvaṁ gurōḥ paraṁ' endudāgi
'advaitaṁ triṣu lōkēṣu nādvaitaṁ guruṇā saha' endudāgi
`gurudēvō mahādēvō' endudāgi
śrīgurutattvavē paratattvavu.
Śiva śivā sakalavēda śāstrapurāṇa āgama
aṣṭādaśavidyaṅgaḷu sarvavidyaṅgaḷu
saptakōṭimahāmantraṅgaḷu upamantraṅgaḷu
anantakōṭigaḷanū garbhīkarisikoṇḍippa
ivake mātr̥sthānavāgi,
ivake utpatti sthiti laya kāraṇaṅgaḷige kāraṇavāgippa
mahātattva mahāmantrarājanu, śrīmūlamantravu.
Ī mahātatvtavu ēkavāda mahāliṅgavu.
Ī mahāliṅgave aṅgavāgippa mahattappa mahāsadbhaktanu.
Ātanē tattvajñanu, ātanē tattvamayanu, ātanē tattvamūrti.
Ī mahāmantra mukhōdgatavāda mahābhaktanu.
Ātanē vēdavittu, ātanē śāstrajñanu, ātanē purāṇikanu,
ātanē āgamajñanu, ātanē sarvajñanu.
Ī mahāghana mahattanoḷakoṇḍa sadbhaktaṅge
itara tattvaṅgaḷanū itara dēvategaḷanū
itara dēvadānavamānavarugaḷanū
itara mantraṅgaḷanū itara padaṅgaḷanū sari enabahude?
Śiva śivā sari endaḍe mahādōṣavu.
Ī mahābhaktanē upamātītanu vāṅmanōtītanu.
Ī mahādēvana bhaktanē mahādēvanu.
Ī mahābhaktana pūjeyē śivaliṅgapūje.
Ī mahābhaktana padavē paramapadavayyā
uriliṅgapeddipriya viśvēśvarā.